ಐಪಿಎಲ್‌ಗೆ ಅಡಚಣೆ ನಿವಾರಿಸಲು ಪ್ರಯತ್ನ, ವಿಂಡೀಸ್‌ಗೆ ಬಿಸಿಸಿಐ ವಿಶೇಷ ಮನವಿ

bcci ipl web
Published on

ನವದೆಹಲಿ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಿರುವ ಬೆನ್ನಲ್ಲೇ ಬಿಸಿಸಿಐ, ಟೂರ್ನಿಗೆ ಇರುವ ಅಡೆತಡೆಗಳನ್ನೂ ನಿವಾರಿಸಲು ಮುಂದಾಗಿದೆ. ಇದರ ಮೊದಲ ಭಾಗವಾಗಿ, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯನ್ನು ಒಂದು ವಾರ ಅಥವಾ 10 ದಿನ ಬೇಗನೆ ಆಯೋಜಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ (ಸಿಡಬ್ಲ್ಯುಐ) ಬಿಸಿಸಿಐ ಮನವಿ ಸಲ್ಲಿಸಿದೆ. ಇದಕ್ಕೆ ಸಿಡಬ್ಲ್ಯುಐ ಒಪ್ಪಿದರೆ, ವಿಂಡೀಸ್ ಮಾತ್ರವಲ್ಲ ಸಿಪಿಎಲ್‌ನಲ್ಲಿ ಆಡುವ ಇತರ ಕೆಲ ವಿದೇಶಿ ಕ್ರಿಕೆಟಿಗರೂ, ಯುಎಇಯಲ್ಲಿ ಐಪಿಎಲ್ ಟೂರ್ನಿಯನ್ನು ಕೂಡಿಕೊಳ್ಳಲು ನೆರವಾಗಲಿದೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಸಿಪಿಎಲ್ ಆಗಸ್ಟ್ 28ರಿಂದ ಸೆಪ್ಟೆಂಬರ್ 19ರವರೆಗೆ ನಡೆಯಲಿದೆ. ಆದರೆ ಬಿಸಿಸಿಐ ಇದೀಗ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ 18ರಂದೇ ಪುನರಾರಂಭ ಮಾಡಲು ಯೋಜಿಸಿದೆ. ಇದರಿಂದ ಸಿಪಿಎಲ್‌ನಲ್ಲಿ ಆಡುವ ಆಟಗಾರರು ಐಪಿಎಲ್‌ಗೆ ಆಗಮಿಸುವುದು ತಡವಾಗಲಿದೆ ಮತ್ತು ಕೆಲ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ, ಸಿಪಿಎಲ್ ಟೂರ್ನಿ ಬೇಗನೆ ಮುಗಿಯುವಂತೆ ಮಾಡಲು ಪ್ರಯತ್ನಿಸಲಿದೆ. ‘ನಾವು ಕ್ರಿಕೆಟ್ ವೆಸ್ಟ್ ಇಂಡೀಸ್ ಜತೆಗೆ ಚರ್ಚಿಸುತ್ತಿದ್ದೇವೆ. ಸಿಪಿಎಲ್ ಬೇಗನೆ ಮುಗಿದರೆ, ಆಟಗಾರರನ್ನು ಅಲ್ಲಿಂದ ದುಬೈನ ಬಯೋಬಬಲ್‌ಗೆ ಕರೆತಂದು 3 ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನೂ ಮುಗಿಸಲು ನೆರವಾಗಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ-ಸಿಡಬ್ಲ್ಯುಐ ದಿನಾಂಕ ಸಂಘರ್ಷವನ್ನು ತಪ್ಪಿಸದಿದ್ದರೆ, ಹಲವು ಪ್ರಮುಖ ವಿದೇಶಿ ಆಟಗಾರರು ಐಪಿಎಲ್ ಭಾಗ-2ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಕೈರಾನ್ ಪೊಲ್ಲಾರ್ಡ್, ಕ್ರಿಸ್ ಗೇಲ್, ಡ್ವೇನ್ ಬ್ರಾವೊ, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಸುನೀಲ್ ನಾರಾಯಣ್ ಅವರಂಥ ವಿಂಡೀಸ್ ಆಟಗಾರರೂ ಅಲಭ್ಯರಾಗಲಿದ್ದಾರೆ. ಜತೆಗೆ ಸಿಪಿಎಲ್‌ನಲ್ಲಿ ಟ್ರಿನಿಡಾಡ್-ಟೊಬಾಗೊ ತಂಡದ ಕೋಚ್ ಆಗಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ ಕೂಡ ಕೋಲ್ಕತ ನೈಟ್‌ರೈಡರ್ಸ್‌ ತಂಡದ ತರಬೇತಿಗೆ ಅಲಭ್ಯರಾಗಲಿದ್ದಾರೆ.

40 ವಿದೇಶಿ ಕ್ರಿಕೆಟಿಗರು ಅನುಮಾನ?

ಐಪಿಎಲ್ 14ನೇ ಆವೃತ್ತಿಯ ಉಳಿದ ಭಾಗವನ್ನು ಮರುನಿಗದಿಗೊಳಿಸಿದ್ದರೂ, ವಿದೇಶಿ ಆಟಗಾರರ ಲಭ್ಯತೆ ಈಗ ಬಿಸಿಸಿಐ ಪ್ರಮುಖ ಸವಾಲಾಗಿ ಕಾಡುತ್ತಿದೆ. ಇಂಗ್ಲೆಂಡ್ ಆಟಗಾರರ ಅಲಭ್ಯತೆ ಈಗಾಗಲೆ ಬಹುತೇಕ ಖಚಿತವಾಗಿದ್ದರೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಲಭ್ಯತೆಯೂ ಅನುಮಾನದಲ್ಲಿದೆ. ಅ್ಘಾನಿಸ್ತಾನ, ಬಾಂಗ್ಲಾದೇಶ ಕ್ರಿಕೆಟಿಗರೂ ಆಡುವುದು ಖಚಿತವಿಲ್ಲ. ಹೀಗಾಗಿ ಐಪಿಎಲ್‌ನ ಉಳಿದ 31 ಪಂದ್ಯಗಳಿಗೆ ಸುಮಾರು 40 ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆ ಅನುಮಾನದಲ್ಲಿದೆ. ದಕ್ಷಿಣ ಆಫ್ರಿಕಾದ ಕೆಲ ಪ್ರಮುಖ ಆಟಗಾರರು ಸಿಪಿಎಲ್‌ನಲ್ಲಿ ಆಡಲಿದ್ದು, ಅದು ಬೇಗನೆ ಮುಕ್ತಾಯಗೊಳ್ಳದಿದ್ದರೆ, ವಿಂಡೀಸ್ ಜತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರೂ ಐಪಿಎಲ್ ಭಾಗ 2ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಬದಲಿಗರಿಗೆ ಫ್ರಾಂಚೈಸಿಗಳ ಕೋರಿಕೆ

ಐಪಿಎಲ್ ಉಳಿದ ಭಾಗಕ್ಕೆ ಅಲಭ್ಯರಾಗಬಹುದಾದ ಪ್ರಮುಖ ವಿದೇಶಿ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಮತ್ತು ಈ ಬಗೆಗಿನ ನಿಯಮಗಳ ಬಗ್ಗೆ ಫ್ರಾಂಚೈಸಿಗಳು, ಬಿಸಿಸಿಐನಿಂದ ಸ್ಪಷ್ಟನೆ ಕೋರಿವೆ. ವಿದೇಶಿ ಆಟಗಾರರ ಗೈರಿನಲ್ಲಿ ಐಪಿಎಲ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಂತಾಗುವ ಅಪಾಯದ ಬಗ್ಗೆಯೂ ಫ್ರಾಂಚೈಸಿಗಳು ತಲೆಕೆಡಿಸಿಕೊಂಡಿವೆ. ಕಳೆದ ಹರಾಜು ಪಟ್ಟಿಯಲ್ಲಿರದ ಕೆಲ ವಿದೇಶಿ ಕ್ರಿಕೆಟಿಗರನ್ನೂ ಬದಲಿ ಆಟಗಾರರನ್ನಾಗಿ ಸೇರಿಸಿಕೊಳ್ಳಲು ಅವಕಾಶ ನೀಡುವಂತೆ ಫ್ರಾಂಚೈಸಿಗಳು ಬೇಡಿಕೆ ಇಡುವ ಸಾಧ್ಯತೆಗಳಿವೆ.

ಆಸೀಸ್ ಕ್ರಿಕೆಟಿಗರ ಹಿಂದೇಟು?

ಯುಎಇಯಲ್ಲಿ ಐಪಿಎಲ್ 2ನೇ ಭಾಗ ಆಡಲು ಆಸ್ಟ್ರೇಲಿಯಾದ ಕ್ರಿಕೆಟಿಗರು ಹಿಂದೇಟು ಹಾಕುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಲ್ಲಿ ಆಸೀಸ್ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇಲ್ಲದೆ ಹೋದರೂ, ಐಪಿಎಲ್ ಬಯೋಬಬಲ್‌ನ ಮಾನಸಿಕ ಸವಾಲಿಗೆ ಆಟಗಾರರು ಹಿಂದೇಟು ಹಾಕಲಿದ್ದಾರೆ ಎನ್ನಲಾಗಿದೆ. ಕೆಕೆಆರ್ ತಂಡದ ಜತೆಗೆ 15 ಕೋಟಿ ರೂ. ಮೊತ್ತದ ದುಬಾರಿ ಒಪ್ಪಂದ ಹೊಂದಿರುವ ವೇಗಿ ಪ್ಯಾಟ್ ಕಮ್ಮಿನ್ಸ್ ಐಪಿಎಲ್‌ನಿಂದ ಹಿಂದೆ ಸರಿಯಲು ಈಗಾಗಲೆ ನಿರ್ಧರಿಸಿದ್ದಾರೆ ಎಂದು ಆಸೀಸ್ ಪತ್ರಿಕಾ ವರದಿ ತಿಳಿಸಿದೆ. ಈಗಾಗಲೆ ಐಪಿಎಲ್ ಸ್ಥಗಿತಗೊಂಡ ಬಳಿಕ ಮಾಲ್ಡೀವ್ಸ್ ಮತ್ತು ತವರಿನ ಕ್ವಾರಂಟೈನ್‌ಗಳಿಂದ ಮಾನಸಿಕವಾಗಿ ದಣಿದಿರುವ ಆಸೀಸ್ ಕ್ರಿಕೆಟಿಗರು, ಟಿ20 ವಿಶ್ವಕಪ್‌ಗೆ ಮುನ್ನ ಮತ್ತೊಂದು ಬಯೋಬಬಲ್ ಸವಾಲಿಗೆ ಹಿಂದೇಟು ಹಾಕಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net