ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯ ಮುಖ ತೋರಿಸದ ಬಗ್ಗೆ ವಿರುಷ್ಕಾ ಸ್ಪಷ್ಟನೆ

976432-vamika
Published on

ಮುಂಬೈ: ಸೆಲೆಬ್ರಿಟಿಗಳ ಮಕ್ಕಳು ಹುಟ್ಟುವಾಗಲೇ ಸೆಲೆಬ್ರಿಟಿಗಳಾಗಿ ಬಿಡುವುದು ಸಾಮಾನ್ಯ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಚಿತ್ರಗಳಂತೆ ಅವರ ಮಕ್ಕಳ ಚಿತ್ರಗಳೂ ಸಾಕಷ್ಟು ಆಕರ್ಷಣೆ ಹೊಂದಿರುತ್ತವೆ. ಕ್ರಿಕೆಟ್ ತಾರೆಯರು ಕೂಡ ಇದರಿಂದ ಹೊರತಲ್ಲ. ಈಗಾಗಲೆ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮ ಅವರಂಥ ಕ್ರಿಕೆಟಿಗರ ಪುತ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಈ ವರ್ಷ ಜನವರಿಯಲ್ಲಿ ಜನಿಸಿರುವ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಯ ಪುತ್ರಿ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಮುಖ ತೋರಿಸಿಲ್ಲ. ವಿರುಷ್ಕಾ ಖ್ಯಾತಿಯ ಕೊಹ್ಲಿ-ಅನುಷ್ಕಾ ದಂಪತಿ ಇದೀಗ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ದಂಪತಿ ಈ ಹಿಂದೆ ಪುತ್ರಿಯ ಹೆಸರನ್ನು ‘ವಾಮಿಕಾ’ ಎಂದು ಘೋಷಿಸುವ ವೇಳೆ ಚಿತ್ರವನ್ನು ಪ್ರಕಟಿಸಿದ್ದರು. ಆದರೆ ಆ ಚಿತ್ರದಲ್ಲಿ ಮಗುವಿನ ಮುಖವನ್ನು ಪ್ರದರ್ಶಿಸಿರಲಿಲ್ಲ. ಹೀಗಾಗಿ ಅಭಿಮಾನಿಗಳು ವಾಮಿಕಾ ಮುಖವನ್ನು ನೋಡಲು ಕಳೆದ ಕೆಲ ಸಮಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದರು. ಆದರೆ ಇದೀಗ ವಿರುಷ್ಕಾ ನೀಡಿರುವ ಸ್ಪಷ್ಟನೆಯಿಂದ ಅಭಿಮಾನಿಗಳು ವಾಮಿಕಾ ಮುಖವನ್ನು ನೋಡಲು ಸುದೀರ್ಘ ಸಮಯದವರೆಗೆ ಕಾಯಬೇಕಾಗುವುದು ಖಚಿತವಾಗಿದೆ.

ಪುತ್ರಿ ವಾಮಿಕಾ ಹೆಸರಿನ ಅರ್ಥವನ್ನು ವಿವರಿಸುವ ಜತೆಗೆ ಕೊಹ್ಲಿ-ಅನುಷ್ಕಾ ದಂಪತಿ ಆಕೆಯ ಚಿತ್ರವನ್ನು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ವಾಮಿಕಾ ಎಂಬುದು ದುರ್ಗಾದೇವಿಯ ಇನ್ನೊಂದು ಹೆಸರಾಗಿದೆ. ಸಾಮಾಜಿಕ ಜಾಲತಾಣ ಎಂದರೆ ಏನು ಎಂದು ಅವಳು ಅರ್ಥಮಾಡಿಕೊಳ್ಳುವವರೆಗೆ ಅವಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸದಿರಲು ನಾವು ನಿರ್ಧರಿಸಿದ್ದೇವೆ. ಯಾಕೆಂದರೆ ಸಾಮಾಜಿಕ ಜಾಲತಾಣಕ್ಕೆ ಬರುವುದು ಅವಳದೇ ಸ್ವಂತ ಆಯ್ಕೆಯಾಗಿರಬೇಕು’ ಎಂದು ಕೊಹ್ಲಿ-ಅನುಷ್ಕಾ ದಂಪತಿ ವಿವರಿಸಿದ್ದಾರೆ.

ಈ ಮುನ್ನ ಜನವರಿ 11ರಂದು ಅನುಷ್ಕಾ ಶರ್ಮ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮಾಧ್ಯಮ ಛಾಯಾಗ್ರಾಹಕರ ದಂಡು ಆಸ್ಪತ್ರೆಯ ಹೊರಗೆ ನೆರೆದಿತ್ತು. ಮಗುವಿನ ಚಿತ್ರವನ್ನು ಕ್ಲಿಕ್ಕಿಸಲು ಅವರು ಕಾತರದಿಂದ ಕಾಯುತ್ತಿದ್ದರು. ಆದರೆ ಆಗ ಮಾಧ್ಯಮ ಛಾಯಾಗ್ರಾಹಕರಿಗೆ ವಿನಯಪೂರ್ವಕ ಮನವಿಯೊಂದನ್ನು ಸಲ್ಲಿಸಿದ್ದ ಕೊಹ್ಲಿ-ಅನುಷ್ಕಾ ದಂಪತಿ, ದಯವಿಟ್ಟು ನಮ್ಮ ಖಾಸಗಿತನಕ್ಕೆ ಗೌರವ ನೀಡಿ. ಮಗುವಿನ ಚಿತ್ರವನ್ನು ಕ್ಲಿಕ್ಕಿಸದಿರಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿದ್ದ ಮಾಧ್ಯಮ ಛಾಯಾಗ್ರಾಹಕರು, ಮಗುವಿನ ಚಿತ್ರವನ್ನು ಕ್ಲಿಕ್ಕಿಸಲು ಮುಗಿಬೀಳದಿರಲು ನಿರ್ಧರಿಸಿ ಅಲ್ಲಿಂದ ನಿರ್ಗಮಿಸಿದ್ದರು. ಕೊಹ್ಲಿ-ಅನುಷ್ಕಾ 2017ರ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಅದಕ್ಕೆ ಕೆಲ ವರ್ಷಗಳ ಮುನ್ನ ಶಾಂಪೋ ಜಾಹೀರಾತು ಶೂಟಿಂಗ್ ವೇಳೆ ಅವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ಕೆಲ ವರ್ಷ ಡೇಟಿಂಗ್ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net