

ಬೆಂಗಳೂರು: ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ' ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ, ಅವರು ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ‘ತಲ್ವಾರ್ಪೇಟೆ’, ‘ಮರ್ಯಾದಸ್ಥ’, ‘ದಂತಕಥೆ’, ಗುರು ದೇಶಪಾಂಡೆ’ ನಿರ್ದೇಶನದ ಹೊಸ ಚಿತ್ರ ... ಹೀಗೆ ವಸಿಷ್ಠ ಮುಂದಿನ ಒಂದು ವರ್ಷದಲ್ಲಿ ಸಾಲುಸಾಲು ಚಿತ್ರಗಳಲ್ಲಿ ನಟಿಸಲಿದ್ದಾರೆ.
ಇದೆಲ್ಲದರ ಜತೆಗೆ, ಅವರು ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರ. ಸದ್ಯಕ್ಕೆ ಇನ್ನೂ ಹೆಸರಿಡದ ಈ ಚಿತ್ರವು ಅಕ್ಟೋಬರ್ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಸದ್ಯಕ್ಕೆ 'ಪ್ರೊಡಕ್ಷನ್ ನಂಬರ್ ಒನ್' ಹೆಸರಿನಿಂದ ಕರೆಯಲ್ಪಡುತ್ತಿರುವ ಈ ಚಿತ್ರದ ಹೆಸರು ಸದ್ಯದಲ್ಲೇ ಅನಾವರಗೊಳ್ಳಲಿದೆ.
ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ದನ ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ವಚನ್ ಈ ಹಿಂದೆ ಪವನ್ ಕುಮಾರ್ ಜೊತೆಗೆ 'ಲೂಸಿಯಾ' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು. ಇನ್ನಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಕಲಿತವರು. ಈಗ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ವಸಿಷ್ಠ ಜತೆಗೆ ಕಿಶೋರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಲ್ಲದೆ, ಕನ್ನಡ ಚಿತ್ರರಂಗದ ಇನ್ನಷ್ಟು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರಕ್ಕೆ 'ಮಫ್ತಿ' ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣವಿದೆ. ಇನ್ನು, 'ಟಗರು' ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.