

ಬೆಂಗಳೂರು: ಕೇಂದ್ರ ಸರ್ಕಾರವು ಚಿತ್ರಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ, ಹಲವು ಚಿತ್ರಗಳ ಮರುಬಿಡುಗಡೆ ಆಗುತ್ತಿವೆ. ಅದರಲ್ಲೂ ಈ ಶುಕ್ರವಾರವಂತೂ ಹಲವು ಸ್ಟಾರ್ ಸಿನಿಮಾಗಳು ಮತ್ತೊಮ್ಮೆ ತೆರೆಕಾಣುತ್ತಿರುವುದು ವಿಶೇಷ.
ಶಿವರಾಜಕುಮಾರ್ ಅಭಿನಯದ 'ಟಗರು', ಸುದೀಪ್ ಅಭಿನಯದ 'ಕೋಟಿಗೊಬ್ಬ 2', ಪುನೀತ್ ಅಭಿನಯದ 'ರಾಜ್ಕುಮಾರ', ದರ್ಶನ್ ಅಭಿನಯದ 'ಕುರುಕ್ಷೇತ್ರ', ಯಶ್ ಅಭಿನಯದ 'ಕೆಜಿಎಫ್' ಸೇರಿದಂತೆ ಹಲವು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಈ ಪೈಕಿ ಶಿವರಾಜಕುಮಾರ್ ಅಭಿನಯದ 'ಟಗರು' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ರೀ-ರಿಲೀಸ್ ಸಂಭ್ರಮವನ್ನು ಆಯೋಜಿಸಿದ್ದಾರೆ. 'ಟಗರು' ಚಿತ್ರವು ಇಂದು, ಶಿರಸಿ ಸರ್ಕಲ್ನಲ್ಲಿರುವ ಗೋಪಾಲನ್ ಆರ್ಕೇಡ್ನ ಗೋಪಾಲನ್ ಸಿನಿಮಾಸ್ನಲ್ಲಿ ಬಿಡುಗಡೆಯಾಗಿದೆ. ಭಾನುವಾರ ಅಂದರೆ ಅಕ್ಟೋಬರ್ 25ರಂದು ಮಶ್ಯಾಹ್ನ ಒಂದು ಗಂಟೆಗೆ ಅಭಿಮಾನಿಗಳ ಜತೆಗೆ 'ಟಗರು' ಚಿತ್ರವನ್ನು ವೀಕ್ಷಿಸುವುದಕ್ಕೆ ನಿರ್ದೇಶಕ ಸೂರಿ, 'ದುನಿಯಾ' ವಿಜಯ್, ಧನಂಜಯ್, ವಸಿಷ್ಠ ಸಿಂಹ ಮುಂತಾದವರು ಭೇಟಿ ನೀಡಲಿದ್ದಾರೆ.
ಚಿತ್ರ ಪ್ರದರ್ಶನದ ನಂತರ, ಗೋಪಾಲನ್ ಸಿನಿಮಾಸ್ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ 'ಟಗರು' ಚಿತ್ರದ ಮರುಬಿಡುಗಡೆ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜತೆಗೆ, ಪ್ರೇಕ್ಷಕರು ಇನ್ನಷ್ಟು ಕನ್ನಡ ಚಿತ್ರಗಳನ್ನು ವೀಕ್ಷಿಸಿ, ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಬೇಕೆಂಬುದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಮನವಿ.
'ಟಗರು' ಚಿತ್ರವು 2018ರಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿ, ಸೂಪರ್ ಹಿಟ್ ಆಗಿತ್ತು. ಶಿವರಾಜಕುಮಾರ್ ಜತೆಗೆ ಭಾವನಾ ಮೆನನ್, ಮಾನ್ವಿತಾ ಕಾಮತ್, ಧನಂಜಯ್, ದೇವರಾಜ್, ವಸಿಷ್ಠ ಸಿಂಹ, 'ಕಾಕ್ರೋಚ್' ಸುಧಿ ಮುಂತಾದವರು ಅಭಿನಯದ ಈ ಚಿತ್ರ ವಿಭಿನ್ನ ನಿರೂಪಣೆಯಿಂದ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಈ ಚಿತ್ರವು ಎರಡು ವರ್ಷಗಳ ನಂತರ ಮರುಬಿಡುಗಡೆಯಾಗುತ್ತಿದೆ.