

ಸತ್ಯಪ್ರಕಾಶ್ ನಿರ್ದೇಶನದ 'ಒಂದಲ್ಲಾ ಎರಡಲ್ಲಾ' ಚಿತ್ರವು ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಈ ಎರಡು ವರ್ಷಗಳಲ್ಲಿ ಚಿತ್ರ ಯಾವುದೇ ಚಾನಲ್ನಲ್ಲೂ ಪ್ರಸಾರವಾಗಿಲ್ಲ. ಹಾಗೆಯೇ ಯಾವುದೇ ಓವರ್ ದಿ ಟಾಪ್ (ಓಟಿಟಿ)ಯಲ್ಲೂ ಇದುವರೆಗೂ ಪ್ರಸಾರ ಆಗಿಲ್ಲ.
ಇಷ್ಟಕ್ಕೂ ಚಿತ್ರ ಸ್ಟ್ರೀಮಿಂಗ್ ಯಾವಾಗ ಮತ್ತು ಎಲ್ಲಿ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಿತ್ರವು ಇದೀಗ ಅಮೇಜಾನ್ ಪ್ರೈಮ್ನಲ್ಲಿ ಇಂದಿನಿಂದ ಸ್ಟ್ರೀಮ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡವರು ಇದೀಗ ಅಮೇಜಾನ್ನಲ್ಲಿ ನೋಡಬಹುದಾಗಿದೆ.
'ಒಂದಲ್ಲಾ ಎರಡಲ್ಲಾ' ಚಿತ್ರವನ್ನು 'ರಾಮಾ ರಾಮಾ ರೇ' ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನ ಮಾಡಿದ್ದು, 'ಹೆಬ್ಬುಲಿ' ಮತ್ತು 'ರಾಬರ್ಟ್' ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ತಮ್ಮ ಉಮಾಪತಿ ಫಿಲಂಸ್ನಡಿ ನಿರ್ಮಾಣ ಮಾಡಿದ್ದಾರೆ.
'ಒಂದಲ್ಲಾ ಎರಡಲ್ಲಾ' ಚಿತ್ರವು ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, ರಾಜ್ಯ ಮಟ್ಟದಲ್ಲಿ ಒಂದು ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದಲ್ಲಿ ರೋಹಿತ್ ಪಾಂಡವಪುರ, ಮಠ ಕೊಪ್ಪಳ, ಸಾಯಿಕೃಷ್ಣ ಕುಡ್ಲಾ, ರಂಜಾನ್ ಸಾಬ್ ಉಳ್ಳಾಗಡ್ಡಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಮತ್ತು ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ.