

ನಾಲ್ಕು ತಿಂಗಳ ಹಿಂದೆಯೇ ಫಿಲ್ಮ್ಸಿಟಿ ನಿರ್ಮಾಣದ ವಿಷಯವಾಗಿ ಸಾಕಷ್ಟು ಚರ್ಚೆಯಾಗಿತ್ತು. ಬೆಂಗಳೂರಿನಲ್ಲಿ ಸೂಕ್ತ ಜಾಗ ಕೊಡುವುದಾಗಿ ಸರ್ಕಾರ ಹೇಳಿತ್ತು. ಅಷ್ಟರಲ್ಲಿ ಕರೊನಾದಿಂದ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಫಿಲ್ಮ್ಸಿಟಿ ಚರ್ಚೆ ನೆನೆಗುದಿಗೆ ಬಿದ್ದಿತ್ತು. ಇದೀಗ ಹೆಸರುಘಟ್ಟದಲ್ಲಿ ಫಿಲ್ಮ್ಸಿಟಿಗಾಗಿ ಸರ್ಕಾರ ಸೂಕ್ತ ಕೊಡಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ನಾರಾಯಣ್ ಆಶ್ವಾಸನೆ ನೀಡಿದ್ದಾರೆ.
ಇಂದು ಶಿವರಾಜಕುಮಾರ್ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗವು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚಿತ್ರರಂಗ ಅನುಭವಿಸುತ್ತಿರುವ ಹಲವು ಸಂಕಷ್ಟಗಳ ಬಗ್ಗೆ ವಿವರಿಸಿತು. ಈ ಸಂದರ್ಭದಲ್ಲಿ ಸಮಸ್ಯೆಗಳನ್ನು ಆಲಿಸಿದ ಉಪಮುಖ್ಯಮಂತ್ರಿಗಳು ಈ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್ನಲ್ಲಿ ಫಿಲ್ಮ್ಸಿಟಿಗೆ ಜಾಗ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ರೋರಿಚ್ ಎಸ್ವೇಟಿನ ಬದಲು ಹೆಸರಘಟ್ಟದಲ್ಲಿಯೇ ನಿರ್ಮಾಣ ಮಾಡಲಾಗುವುದು ಎಂದು ಅಶ್ವತ್ಥ್ನಾರಾಯಣ್ ತಿಳಿಸಿದರು.
'ಹೆಸರುಘಟ್ಟದಲ್ಲಿ ಪಶುಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲ್ಮ್’ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲಿ ಫಿಲ್ಮ್ ಸಿಟಿಗೆ ಸಂಪರ್ಕಕ್ಕೆ ಬೇಕಾದ ರಸ್ತೆಯೊಂದನ್ನು ಮಾಡಿ ಆ ಜಾಗವನ್ನು ಫಿಲ್ಮ್ ಸಿಟಿಗೆ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಬೇಗ ಫಿಲ್ಮ್ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು' ಎಂದು ಉಪ ಮುಖ್ಯಮಂತ್ರಿ ಹೇಳಿದರು.
'ಚಿತ್ರರಂಗದಲ್ಲಿ ಅಸಂಘಟಿತ ದಿನಗೂಲಿ ನೌಕರರ ಹಿತ ಕಾಯುವ ಬಗ್ಗೆ ಆದಷ್ಟು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾರ್ಮಿಕ ಇಲಾಖೆ ಅಡಿಗೆ ತಂದು ಸರಕಾರದ ಸವಲತ್ತುಗಳು ಅವರಿಗೂ ಸಿಗುವಂತೆ ನೋಡಿಕೊಳ್ಳಲಾಗುವುದು. ಪ್ರದರ್ಶಕ ವಲಯದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರಿಗೂ ಸರಕಾರ ಸಹಾಯ ಹಸ್ತ ಚಾಚಲಿದೆ.
ಈ ಬಗ್ಗೆ ಸಂಬಂಧಪಟ್ಟವರ ಜತೆ ಆದಷ್ಟು ಬೇಗ ಚರ್ಚೆ ಮಾಡಲಾಗುವುದು. ಇದರ ಜತಗೆ ಸಕಾಲದಲ್ಲಿ ಸಬ್ಸಿಡಿ ಸಿಗುವಂತೆ ಮಾಡುವುದು, ಆ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವುದು, ಜಿಎಸ್’ಟಿ ವಿಚಾರದಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಸಿನಿಮಾ ನಿರ್ಮಾಣಕ್ಕೆ ಪೂರಕವಾದ ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವುದೂ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಮಾತುಕತೆಯಾಗಿದ್ದು, ಮುಖ್ಯಮಂತ್ರಿಗಳ ಜತೆ ಸಭೆ ನಡೆದ ನಂತರ ಇವೆಲ್ಲಕ್ಕೂ ಪರಿಹಾರ ಸಿಗಲಿದೆ' ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ನಂತರ ಮಾತನಾಡಿದ ಶಿವರಾಜಕುಮಾರ್, 'ಕರೊನಾದಿಂದ ಚಿತ್ರರಂಗ ಕಂಗೆಟ್ಟಿದೆ. ಸರಕಾರವೇ ನಮ್ಮ ಚಿತ್ರರಂಗವನ್ನು ರಕ್ಷಿಸಬೇಕು. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಉಪ ಮುಖ್ಯಮಂತ್ರಿಗಳ ಜತೆ ನಡೆಸಿದ ಮಾತುಕತೆ ಸಕಾರಾತ್ಮಕವಾಗಿತ್ತು. ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು' ಎಂದು ಹೇಳಿದರು.