

ಬಾಲಿವುಡ್ನ ಜನಪ್ರಿಯ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂಬ ವಿಷಯ ಹೊರಬರುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ. ಅದರಲ್ಲೂ ನಾಲ್ಕನೇ ಹಂತದ ಕ್ಯಾನ್ಸರ್ ಎಂಬ ವಿಷಯ ಕೇಳಿ ಹಲವರು ದಿಗ್ಭ್ರಾಂತರಾಗಿದ್ದಾರೆ.
ಆದರೆ, ಸಂಜಯ್ ದತ್ ಮಾತ್ರ ಕ್ಯಾನ್ಸರ್ ಗೆದ್ದು ಬರುವುದಾಗಿ ಹೇಳಿಕೊಂಡಿದ್ದಾರೆ. ತಾವು ಕೆಲವು ದಿನಗಳ ಕಾಲ ಅಭಿನಯದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದು, ಆದಷ್ಟು ಬೇಗ ಹುಷಾರಾಗಿ ಕ್ಯಾಮೆರಾ ಮುಂದೆ ಬಂದು ನಿಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಯಶ್ ಅಭಿನಯದ 'ಕೆಜಿಎಫ್ - ಚಾಪ್ಟರ್ 2' ಕಥೆಯೇನು ಎಂಬ ಪ್ರಶ್ನೆಯು ಎಲ್ಲರನ್ನೂ ಕಾಡುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ, ಸಂಜಯ್ ದತ್ ಅವರು ಚಿತ್ರದಲ್ಲಿ ಅಧೀರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು.
ಈಗಾಗಲೇ ಸಂಜಯ್ ದತ್ ಅವರಯ ಹೈದರಾಬಾದ್ನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇನ್ನು ಸದ್ಯದಲ್ಲೇ ಶುರುವಾಗಲಿರುವ ಚಿತ್ರೀಕರಣದಲ್ಲಿ ಅವರು ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಭಾಗದ ಚಿತ್ರೀಕರಣ ಯಾವಾಗ ಆಗುತ್ತದೆ? ಇದರಿಂದ ಚಿತ್ರೀಕರಣ ವಿಳಂಬವಾಗುತ್ತದಾ? ಇದರಿಂದ ಚಿತ್ರದ ಬಿಡುಗಡೆ ಇನ್ನಷ್ಟು ವಿಳಂಬವಾಗುತ್ತದಾ ಎಂಬ ಹಲವು ಪ್ರಶ್ನೆಗಳು ಎಲ್ಲರಲ್ಲೂ ಮನೆ ಮಾಡಿತ್ತು.
ಈ ಎಲ್ಲಾ ಪ್ರಶ್ನೆಗಳಿಗೂ ಇದೀಗ ಉತ್ತರ ಸಿಕ್ಕಿದೆ. ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು 'ಕೆಜಿಎಫ್ - 2' ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದಾರೆ. ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿರುವ ಅವರು, 'ಯಾವ ಸಮಸ್ಯೆಯೂ ಇಲ್ಲ. ಸಂಜಯ್ ದತ್ ಅವರದ್ದು ಇದ್ದಿದ್ದು ಕೇವಲ ಎರಡು ದಿನಗಳ ಶೂಟಿಂಗ್ ಮಾತ್ರ. ಅದೂ ಸಹ ಎಕ್ಸ್ಟೆನ್ಶನ್ ದೃಶ್ಯಗಳು. ಆ ದೃಶ್ಯಗಳಿಲ್ಲದಿದ್ದರೂ ಪರವಾಗಿಲ್ಲ. ಮಿಕ್ಕಂತೆ ಅವರ ಭಾಗದ ಚಿತ್ರೀಕರಣವೆಲ್ಲಾ ಮುಗಿದಿದೆ' ಎನ್ನುತ್ತಾರೆ.
ಇನ್ನು ಚಿತ್ರದ ಚಿತ್ರೀಕರಣವು ಇದೇ ಆಗಸ್ಟ್ 16ರಿಂದ ಪ್ರಾರಂಭವಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಆಗಸ್ಟ್ 18ರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಕಾರ್ತಿಕ್. 'ಚಿತ್ರದ ಸೆಟ್ಗಳ ಕೆಲಸ ಸ್ವಲ್ಪ ಬಾಕಿ ಇತ್ತು. ಮಳೆ ಬಂದಿದ್ದರಿಂದ ಕೆಲಸ ನಿಧಾನವಾಯಿತು. ಆದಷ್ಟು ಬೇಗ ಮುಗಿಸಿ, ಆಗಸ್ಟ್ 18ರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ' ಎನ್ನುತ್ತಾರೆ ಕಾರ್ತಿಕ್.
ಅಂದಹಾಗೆ, 'ಕೆಜಿಎಫ್ 2' ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ಬಾಕಿ ಇದ್ದು, ಕಂಠೀರವ ಸ್ಟುಡಿಯೋ ಮತ್ತು ಮಿನರ್ವ ಮಿಲ್ನಲ್ಲಿ ವಿಶೇಷ ಸೆಟ್ಗಳನ್ನು ಹಾಕಲಾಗಿದೆ. ಮೊದಲು 15 ದಿನಗಳ ಚಿತ್ರೀಕರಣ ಮುಗಿಸಿ, ಒಂದು ಸಣ್ಣ ಗ್ಯಾಪ್ನ ನಂತರ ಮಿಕ್ಕ 10 ದಿನಗಳ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.