ವರುಣ್​-ಕಿಯಾರಾ ಆಯ್ತು ... ಈಗ ರಣ್ವೀರ್​-ಆಲಿಯಾ ಜತೆ ಕರಣ್​ ಚಿತ್ರ

Alia - Ranveer - Final
Published on

ಕಳೆದ ಕೆಲವು ತಿಂಗಳುಗಳಲ್ಲಿ ತನ್ನದಲ್ಲದ ತಪ್ಪಿಗೆ ಜನರಿಂದ ಸಿಕ್ಕಾಪಟ್ಟೆ ನಿಂದನೆಗೊಳಗಾದ ಒಬ್ಬ ವ್ಯಕ್ತಿ ಎಂದರೆ ಅದು ಕರಣ್​ ಜೋಹರ್​. ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ವಿಷಯವಾಗಿ ಸಾಕಷ್ಟು ಸುದ್ದಿಯಾಯಿತು. ಸ್ವಜನಪಕ್ಷಪಾತವನ್ನು ಕರಣ್​ ಪೋಷಿಸುತ್ತಾರೆ ಎಂಬ ಕಾರಣಕ್ಕೆ ಜನರೆಲ್ಲಾ ಅವರ ಮೇಲೆ ಮುಗಿಬಿದ್ದರು.

ಆಮೇಲೆ ಏನೆಲ್ಲಾ ಆಯಿತೆಂದು ಗೊತ್ತಿರಬಹುದು. ಈಗ ಅದೆಲ್ಲಾ ಹಳೆಯ ಕಥೆಯನ್ನು ಮರೆಯುವುದಕ್ಕೆ ಕರಣ್​ ತೀರ್ಮಾನಿಸಿದ್ದಾರಂತೆ. ಒಂದಿಷ್ಟು ಹೊಸ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರಂತೆ. ಈಗಾಗಲೇ ವರುಣ್​ ಧವನ್​ ಮತ್ತು ಕಿಯಾರಾ ಅಡ್ವಾಣಿ ಅಭಿನಯದಲ್ಲಿ ಅವರೊಂದು ಚಿತ್ರ ನಿರ್ಮಿಸುತ್ತಿರುವ ಸುದ್ದಿ ಇದೆ.

ಈಗ ಅವರು ರಣ್ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಿರುವ ಫ್ರೆಶ್​ ಸುದ್ದಿಯೊಂದು ಬಾಲಿವುಡ್​ ಅಂಗಳದಿಂದ ಬಂದಿದೆ.

ಈ ಹಿಂದೆ ರಣ್ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಅಭಿನಯದಲ್ಲಿ 'ತಖ್ತ್​' ಎಂಬ ಚಿತ್ರ ಘೋಷಿಸಿದ್ದರು ಕರಣ್​. ಈ ಚಿತ್ರದಲ್ಲಿ ಅವರಿಬ್ಬರಷ್ಟೇ ಅಲ್ಲ, ಅನಿಲ್​ ಕಪೂರ್, ಕರೀನಾ ಕಪೂರ್​, ವಿಕ್ಕಿ ಕೌಶಾಲ್​, ಜಾಹ್ನವಿ ಕಪೂರ್​ ಸೇರಿದಂತೆ ಹಲವು ಕಲಾವಿದರಿದ್ದರು. ಇದೊಂದು ದೊಡ್ಡ ಬಜೆಟ್​ನ ಐತಿಹಾಸಿಕ ಚಿತ್ರವಾಗಿತ್ತು. ಚಿತ್ರವನ್ನು ಅವರು ಶುರು ಮಾಡಿದ್ದಾರಾದರೂ, ಕಾರಣಾಂತರಗಳಿಂದ ಚಿತ್ರ ಮುಂದುವರೆಯುತ್ತಲೇ ಇಲ್ಲ.

ಹಾಗಾಗಿ ಅದನ್ನು ಮುಂದಕ್ಕೆ ಹಾಕಿ, ಆ ಜಾಗದಲ್ಲಿ ಇನ್ನೊಂದು ಸಣ್ಣ ಬಜೆಟ್​ ರೊಮ್ಯಾಂಟಿಕ್​ ಕಾಮಿಡಿ ಮಾಡುವ ಯೋಚನೆ ಅವರದು. ಅಂಥದ್ದೊಂದು ಕಥೆ ಸಿದ್ಧವಾಗುತ್ತಿದ್ದಂತೆಯೇ ಅವರು ರಣ್ವೀರ್​ ಕಪೂರ್​ನ ಕೇಳಿದ್ದಾರೆ. ರಣ್ವೀರ್​ ಎಸ್​ ಅಂದಿದ್ದೇ ತಡ, ಆಲಿಯಾ ಅವರನ್ನು ಕ್ಯಾಚ್​ ಹಾಕಿಕೊಳ್ಳಲಾಗಿದೆ.

ಅಲ್ಲಿಗೆ, 'ಗಲ್ಲಿ ಬಾಯ್​' ಚಿತ್ರದ ನಂತರ ರಣ್ವೀರ್ ಮತ್ತು ಆಲಿಯಾ ಇಬ್ಬರೂ, 'ತಖ್ತ್​​' ಚಿತ್ರದಲ್ಲಿ ಜತೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈಗ ಅದಕ್ಕೂ ಮುನ್ನವೇ, ಇಬ್ಬರೂ ಇನ್ನೊಂದು ರೊಮ್ಯಾಂಟಿಕ್​ ಕಾಮಿಡಿ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net