ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿ ಸೈಫ್​-ಕರೀನಾ?

Kareena
Published on

ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್ ದಂಪತಿಯು ಹೊಸ ಮನೆಗೆ ಹೋಗುವ ಖುಷಿಯಲ್ಲಿದ್ದಾರೆ. ಈ ಮಧ್ಯೆ, ಅವರಿಬ್ಬರೂ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ.

ಹೌದು, ಸೈಫೀನಾ ಇದೀಗ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದು, ಈಗಾಗಲೇ ಈ ವಿಷಯವನ್ನು ತಮ್ಮ ಆಪ್ತವಲಯಕ್ಕೆ ತಿಳಿಸಿದ್ದಾರಂತೆ. ಇದುವರೆಗೂ ಆಪ್ತವಲಯದಲ್ಲಿದ್ದ ಈ ಸುದ್ದಿ, ಇದೀಗ ನಿಧಾನಕ್ಕೆ ಲೀಕ್​ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

'ತಶನ್​' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ ಸೈಫ್​ ಅಲಿ ಖಾನ್​ ಮತ್ತು ಕರೀನಾ ನಡುವೆ ಪ್ರೇಮಾಂಕುರವಾಗಿತ್ತು. ಅವರ ನಡುವೆ 10 ವರ್ಷಗಳ ಅಂತರವಿದ್ದು, ಈ ಮದುವೆ ಹೆಚ್ಚು ಕಾಲ ಬಾಳುತ್ತದಾ ಎಂಬುದು ಹಲವರ ಪ್ರಶ್ನೆಯಾಗಿತ್ತು. ಮೇಲಾಗಿ ಇದು ಸೈಫ್​ ಅವರ ಎರಡನೆಯ ಮದುವೆ. ಇದಕ್ಕೂ ಮುನ್ನ ಅವರು ನಟಿ ಅಮೃತಾ ಸಿಂಗ್​ ಅವರನ್ನು ಮದುವೆಯಾಗಿದ್ದು, ಮಗಳು ಸಾರಾ ಅಲಿ ಖಾನ್​ ಸಹ ಈಗ ಚಿತ್ರನಟಿಯಾಗಿದ್ದಾಳೆ.

ಹೀಗೆ 2012ರಲ್ಲಿ ಮದುವೆಯಾದ ಸೈಫ್​ ಮತ್ತು ಕರೀನಾ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 2016ರಲ್ಲಿ ತೈಮುರ್​ಗೆ ಜನ್ಮ ನೀಡಿದ ಕರೀನಾ, ಸಂದರ್ಶನವೊಂದರಲ್ಲಿ ಇನ್ನೊಂದು ಮಗು ಬೇಕು ಎಂದು ಹೇಳಿದ್ದರು. ತೈಮುರ್​ ಸ್ವಲ್ಪ ದೊಡ್ಡವನಾದ ಮೇಲೆ ಇನ್ನೊಂದು ಮಗುವಿನ ತಾಯಿಯಾಗುವುದಕ್ಕೆ ಬಯಸುತ್ತಿರುವುದಾಗಿ ಅವರು ಹೇಳಿದ್ದರು.

ಅದರಂತೆ, ಇದೀಗ ತೈಮುರ್​ಗೆ ನಾಲ್ಕು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಸೈಫ್​ ಮತ್ತು ಕರೀನಾ, ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯ, 'ತಖ್ತ್​' ಮತ್ತು 'ಲಾಲ್​ ಸಿಂಗ್​ ಛಡ್ಡಾ' ಚಿತ್ರಗಳಲ್ಲಿ ಕರೀನಾ ನಟಿಸುತ್ತಿದ್ದು, ಎರಡೂ ಚಿತ್ರಗಳ ಚಿತ್ರೀಕರಣ ಕರೊನಾ ಹಾವಳಿಯಿಂದ ನಿಂತಿವೆ. 'ತಖ್ತ್​' ಚಿತ್ರದ ಚಿತ್ರೀಕರಣ ಮುಂದಿನ ವರ್ಷಕ್ಕೆ ಹೋಗಿದ್ದು, 'ಲಾಲ್​ ಸಿಂಗ್​ ಛಡ್ಡಾ' ಚಿತ್ರದ ಚಿತ್ರೀಕರಣ ಅಕ್ಟೋಬರ್​ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net