ನಿರೂಪ್​ ಹುಟ್ಟುಹಬ್ಬಕ್ಕೆ 'ಫ್ಯಾಂಟಮ್​' ತಂಡ ಕೊಟ್ಟ ಗಿಫ್ಟ್​ ಇದು ...

niroop
Published on

ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರದಲ್ಲಿ ನಿರೂಪ್​ ಭಂಡಾರಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಚಿತ್ರದಲ್ಲಿ ಅವರ ಪಾತ್ರವೇನು? ಅವರು ಹೇಗೆ ಕಾಣುತ್ತಾರೆ? ಎಂಬ ಯಾವುದೇ ಪ್ರಶ್ನೆಗಳಿಗೂ ಉತ್ತರ ಸಿಕ್ಕಿರಲಿಲ್ಲ.

ಇದೀಗ ಕೊನೆಗೂ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಿರೂಪ್​ ಈ ಚಿತ್ರದಲ್ಲಿ ಸಂಜೀವ್​​ ಗಂಭೀರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಹೆಸರು ಗೊತ್ತಾಗಿದೆಯಾದರೂ, ಆ ಪಾತ್ರ ಏನು ಮಾಡುತ್ತದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಇಂದು ನಿರೂಪ್​ ಭಂಡಾರಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡದವರು ನಿರೂಪ್​ ಅವರ 'ದಿ ವರ್ಲ್ಡ್​ ಆಫ್​ ಫ್ಯಾಂಟಮ್​' ಸೀರೀಸ್​ನಡಿ ನಿರೂಪ್​ ಅವರ ಮೊದಲ ಲುಕ್​ ಬಿಡುಗಡೆ ಮಾಡಿದ್ದಾರೆ. ಖುದ್ದು ಸುದೀಪ್​, ತಮ್ಮ ಟ್ವಿಟರ್​ ಹ್ಯಾಂಡಲ್​ ಮೂಲಕ ನಿರೂಪ್​ ಅವರ ಫಸ್ಟ್​ ಲುಕ್ ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

'ಫ್ಯಾಂಟಮ್​' ಚಿತ್ರದ ಶೂಟಿಂಗ್​ ಕಳೆದ ತಿಂಗಳಿನಿಂದ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸತತವಾಗಿ ನಡೆಯುತ್ತಿದೆ. ಸ್ಟುಡಿಯೋದಲ್ಲಿ ಚಿತ್ರಕ್ಕೆಂದೇ ಕಾಡಿನ ಸೆಟ್​ ಹಾಕಲಾಗಿರುವುದು ವಿಶೇಷ. ಈಗಾಗಲೇ ಈ ಸೆಟ್​ಗಳಲ್ಲಿ ಚಿತ್ರೀಕರಣವಾದ ಎರಡು ತುಣುಕುಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಸ್ನೀಕ್​ಪೀಕ್​ಗಳ ಬಗ್ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.

ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ 'ಫ್ಯಾಂಟಮ್​' ಚಿತ್ರದಲ್ಲಿ ಸುದೀಪ್​, ವಿಕ್ರಾಂತ್​ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಿಕ್ಕಂತೆ ಶ್ರದ್ಧಾ ಶ್ರೀನಾಥ್​, ನಿರೂಪ್​ ಭಂಡಾರಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net