ತಪ್ಪನ್ನು ಸರಿಪಡಿಸಲು ವಚನಗಳೇ ಮದ್ದು: ಕೇಂದ್ರ ಸಚಿವ V. Somanna ಅಭಿಮತ

V Somanna
Published on

ನವದೆಹಲಿ: ಬದುಕಿನಲ್ಲಿ ತಪ್ಪುಗಳಾಗಿದ್ದರೆ, ಅವುಗಳನ್ನು ಸರಿಪಡಿಸಲು ಶರಣರ ವಚನಗಳು (vachanas) ಸಹಕಾರಿಯಾಗುತ್ತವೆ. ವಿಶಾಲವಾದ ಜಗತ್ತಿನಲ್ಲಿ ನಾವಿದ್ದರೂ, ವಚನ ಸಾಹಿತ್ಯ ಎಷ್ಟೇ ಶ್ರೀಮಂತವಾಗಿದ್ದರೂ, ಅದು ನಮ್ಮ ಜೀವನಕ್ಕೆ ಹತ್ತಿರವಾಗದೆ, ದೂರವೇ ಉಳಿದಂತಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ವಿಷಾದ ವ್ಯಕ್ತಪಡಿಸಿದರು.

ದೆಹಲಿಯ ಪ್ರಜ್ಞಾಪ್ರವಾಹ ಮತ್ತು ಕೆಂಪೇಗೌಡ ಫೌಂಡೇಷನ್‌ ಸಂಯುಕ್ತ ಆಶ್ರಯದಲ್ಲಿ ದೆಹಲಿ ಕರ್ನಾಟಕ ಸಂಘದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ನಾನು ಒಂದು ಸಣ್ಣ ಹಳ್ಳಿಯ ತುಂಬು ಕುಟುಂಬದಲ್ಲಿ ಹುಟ್ಟಿದ್ದೆ. ಬೆಳಗ್ಗೆ ರಾಗಿ ಬೀಸುವಾಗ, ತಾಯಿ ಅನೇಕ ವಚನಗಳನ್ನು ಹಾಡುತ್ತಿದ್ದರು ಸಮಾಜದ ಉನ್ನತಿಗಾಗಿ ಗುರು ಮತ್ತು ಹಿರಿಯರ ಸಿದ್ಧಾಂತಗಳೇ ಸಾಕ್ಷಾತ್ ದೀಪಗಳು. ಆದರೆ, ಅವುಗಳ ನಿಜ ಅರ್ಥವನ್ನು ಸರಿಯಾಗಿ ಅರ್ಥೈಸದ ಕೆಲವರು, ಸಮಾಜದ ಅಸ್ವಸ್ಥತೆಗೆ ಕಾರಣರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇತಿಹಾಸವನ್ನು ಸರಿಯಾಗಿ ತಿಳಿಯದೆ ಅಥವಾ ತಿಳಿಸದೆ ಹೋದರೆ, ವ್ಯಕ್ತಿತ್ವ ವಿಕಾಸಗೊಳ್ಳುವುದಿಲ್ಲ. ಅಂತಹ ವ್ಯಕ್ತಿಯಿಂದ ಸಮಾಜದ ಉನ್ನತಿ ಸಾಧ್ಯವಿಲ್ಲ. ಆದರ್ಶ ರಾಜಕೀಯ ವ್ಯಕ್ತಿಯಾಗಬೇಕಾದರೆ, ಜಾತಿಯ ಉನ್ನತಿಗಾಗಿ ಅಲ್ಲ, ಸಮಾಜದ ಪರವಾಗಿ ಕಾಳಜಿಯುಳ್ಳ ಮತ್ತು ಪ್ರೀತಿ ತುಂಬಿದ ಗುರುಗಳ ಮಾರ್ಗದರ್ಶನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

V Somanna vachana

ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ ಮಾತನಾಡಿ, ವಚನಗಳು ಸಾಮಾನ್ಯವಾಗಿ ಭಕ್ತಿಗೆ ಪ್ರಧಾನ್ಯತೆಯನ್ನು ನೀಡುತ್ತವೆ, ಅದು ಸರಳ ಆಧ್ಯಾತ್ಮಿಕ ಸಾಧನೆ ಮಾರ್ಗವನ್ನು ತೋರಿಸುತ್ತದೆ. ಶಿವಶರಣರ ವಚನಗಳು ಕೇವಲ ಮಾತುಗಳಲ್ಲ; ಅವು ಸಮಾಜದಲ್ಲಿ ಕೀಳಿರಿಮೆಯನ್ನು ದೂರ ಮಾಡುವ ಶಕ್ತಿ ಹೊಂದಿವೆ. ಬಸವಣ್ಣನವರು, ಅನುಭವ ಮಂಟಪದ ಮೂಲಕ, ನೈಜ ಭಕ್ತಿಯ ಪರಿಚಯ ಮಾಡಿಸಿ, ಭಕ್ತಿಯ ಪುನರುತ್ಥಾನವನ್ನು ಮಾಡಿದರು. ಶರಣರು ಕೇವಲ ವಚನಗಳನ್ನು ಬರೆದದ್ದೇ ಅಲ್ಲ, ತಮ್ಮ ಆದರ್ಶ ಜೀವನಶೈಲಿಯಿಂದ ಸಮಾಜದಲ್ಲಿ ಬದಲಾವಣೆ ತಂದವರು ಎಂದು ವಿವರಿಸಿದರು.

"ವಚನದರ್ಶನ" ಪುಸ್ತಕದ ಸಾರಾಂಶದ ಕುರಿತು, 'ದರ್ಶನ' ಎಂಬ ಪದವನ್ನು ಎರಡು ದೃಷ್ಟಿಕೋನಗಳಿಂದ ಅರ್ಥೈಸಬೇಕು. ಮೊದಲನೆಯದು, ಬಾಹ್ಯ ಇಂದ್ರಿಯಗಳ ಮೂಲಕ ನೋಡುವುದು, ಅದು ಕೇವಲ ದೃಶ್ಯ ಮಾತ್ರ; ಅರ್ಥಗರ್ಭಿತವಾಗದೇ ಇರಬಹುದು. ಆದರೆ, ಒಳಗಣ್ಣಿನಿಂದ ನೋಡುವುದನ್ನು ದರ್ಶನ ಎಂದು ಕರೆಯುತ್ತಾರೆ. 800 ವರ್ಷಗಳ ಕಾಲ ವಚನಗಳು ತಮ್ಮ ಸರಳ ಭಾಷೆಯ ಮೂಲಕ ಆಳವಾದ ಚಿಂತನೆಗಳನ್ನು ನೀಡುತ್ತ, ಸಮಾಜದ ನೈತಿಕತೆಯನ್ನು ವೃದ್ಧಿಸುತ್ತಿವೆ ಎಂದರು.

ಆಶೀರ್ವಚನ ನೀಡಿದ ಶ್ರೀ ಶಿವಾನಂದ ಬೃಹನ್ಮಠ ಗದಗದ ಪರಮಪೂಜ್ಯ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿ, ಭಗವಂತನನ್ನು ಇಷ್ಟದೈವವಾಗಿ ನಮ್ಮ ಅಂಗೈಯಲ್ಲಿ ಇತ್ತು ಪೂಜಿಸುವುದು ಬಸವಣ್ಣನವರ ಜೀವನದ 'ಅನ್ವೇಷಣೆ' ಎಂದು ಕರೆದರೂ ತಪ್ಪಾಗಲಾರದು ಹಾಗೂ ಬಸವಣ್ಣನವರ ವ್ಯಕ್ತಿತ್ವ ಹಾಗೂ ಭಕ್ತಿಯ ಪರಿಚಯವನ್ನು ನಾಗಲಾಂಬಿಕೆಯ ವಚನಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು ಎಂದು ಹೇಳಿದರು.

V Somanna vachana

ಗಂಗೋತ್ರಿಯ ಗಂಗೆ, ಯಮುನೋತ್ರಿಯ ಯಮುನೆ, ಪರಮಪವಿತ್ರವಾದ ನೀರಿನಂತೆ, ಮನುಷ್ಯನ ಸಹವಾಸಕ್ಕೆ ಬಂದ ನಂತರ ಅದನ್ನು ಸರಿಯಾಗಿ ಬಳಸದೇ ಅಶುದ್ಧಗೊಳಿಸುತ್ತೇವೆ. ಇದನ್ನು ಅನುಸರಿಸುತ್ತಲೇ, ಬಸವಣ್ಣನವರು ಸಮಾಜದಲ್ಲಿದ್ದ ಅಸಂಪ್ರದಾಯಕ ಪದ್ಧತಿಗಳನ್ನು, ಅಶುದ್ಧ ಚಿಂತನೆಯನ್ನು ತೆಗೆಯಲು ಪ್ರಯತ್ನಿಸಿದರು. ಬಸವಣ್ಣನವರ ಕರ್ಮವನ್ನೇ ಅಥವಾ ಅದರ ರೀತಿನೀತಿಗಳನ್ನು ತೆಗೆಯಬೇಕೆಂದು ಹೇಳಿಲ್ಲ, ಆದರೆ ಅವುಗಳಿಗೆ ಅಂಟಿಕೊಂಡಿರುವ ಅಶುದ್ಧ ಚಿಂತನೆಯನ್ನು ದೂರಮಾಡಲು ಪ್ರಯತ್ನಿಸಿದರು. 800 ವರ್ಷಗಳ ಹಿಂದಿನ ದೇವರುಗಳು ಹಾಗೇ ಇದ್ದಾರೆ. ಶರಣರ ವಚನಗಳ ಭಾವವೂ ಹಾಗೇ ಇದೆ. ಆದರೆ ಇತ್ತೀಚಿನ 20 ವರ್ಷಗಳಲ್ಲಿ, ಭಕ್ತಿಯ ಮೇಲೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಬಸವಣ್ಣನವರ ಚಿಂತನೆ ಭಕ್ತಿಯ ಮೂಲಕ ಸಾಮರಸ್ಯ ಹಾಗೂ ಸಮನ್ವಯವನ್ನು ತೋರಿಸುವುದಾಗಿತ್ತು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದೆಹಲಿ ಕರ್ನಾಟಕದ ಸಂಘದ ಅಧ್ಯಕ್ಷ ಸಿ. ಎಂ ನಾಗರಾಜ್, ದೆಹಲಿಯ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಪ್ರಕಾಶ್ ಸಿಂಗ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ನಿರ್ದೇಶಕ ಡಾ. ಎಂ ಶ್ರೀನಿವಾಸ್‌, ಜೆಎನ್‌ಯು ಪ್ರೊಫೆಸರ್‌ ಡಾ. ಸಂಗಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮಂತ್ರಿ ಸ್ಥಾನ ಬೇಡ ಎಂದಿದ್ದೆ!

ಪ್ರಧಾನಿಯವರು ಕರೆದಿದ್ದಾಗ ನನಗೆ ಮಂತ್ರಿ ಸ್ಥಾನ ಬೇಡ ಎಂದಿದ್ದೆ. ಅವರು ಯಾಕೆ ಎಂದು ಕೇಳಿದಾಗ, ನನಗೆ ಹಿಂದಿ, ಇಂಗ್ಲಿಷ್‌ ಅಷ್ಟಾಗಿ ಬರೋಲ್ಲ ಎಂದಿದ್ದೆ. ಆದರೆ, ಮೋದಿಯವರು ಬುದ್ಧಿ ಹೇಳಿ, ಭಾಷೆ ನಮ್ಮ ಕೆಲಸಕ್ಕೆ ಅಡ್ಡಿ ಆಗದು. ನೀವು ಕಲಿತುಕೊಳ್ಳಿ, ಅಧಿಕಾರಿಗಳಿಂದ ನೆರವು ಪಡೆದುಕೊಳ್ಳಿ. ಎಲ್ಲವೂ ಸರಿ ಹೋಗುತ್ತದೆ ಎಂದು ಬೆನ್ನುತಟ್ಟಿದರು. ಈಗ ಮೂರ್ನಾಲ್ಕು ತಿಂಗಳಲ್ಲಿ ಭಾಷೆ ಸುಧಾರಿಸಿಕೊಂಡು, ದಿಲ್ಲಿಯಲ್ಲಿ ಕೆಲಸ ಮಾಡುವುದು ಹೇಗೆ ಕಲಿತುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ಸೋಮಣ್ಣ ಮಾಹಿತಿ ಹಂಚಿಕೊಂಡರು. ಗೊಂದಲ ಸೃಷ್ಟಿ ಮಾಡುವ ಕೆಲ ಬುದ್ಧಿ ಜೀವಿಗಳಿರುತ್ತಾರೆ. ಅವರು ಆ ಕಡೆ, ಈ ಕಡೆ ಎರಡೂ ಕಡೆ ಇರುತ್ತಾರೆ. ಆದರೆ ಶರಣರ ವಾಣಿಯಂತೆ ನಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net