Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ ಒಂದಲ್ಲ ಒಂದು ವಿಚಾರಕ್ಕೆ ಹಣವನ್ನು ಪಡೆಯುವ ಅಗತ್ಯತೆ ಇರುತ್ತದೆ. ಅದು ಸಾಲದ ರೂಪದಲ್ಲಿ ಎಂಬುದು ಗಮನಾರ್ಹ. ಸಾಲ ಎಂದರೆ ಅದು ಕೇವಲ ನಗದು ರೂಪದಲ್ಲೇ ಪಡೆಯಬೇಕು ಎಂದೇನಿಲ್ಲ! ಹೊಸ ಮೊಬೈಲ್ನಿಂದ ಹಿಡಿದು ಯಾವುದಾದರೂ ವಸ್ತು ಖರೀದಿಸಿದರೆ, ಅದನ್ನು ತಿಂಗಳ ಕಂತುಗಳಲ್ಲಿ ಪಡೆಯುವುದು ಕೂಡ ಸಾಲವೇ. ಡೌನ್ಪೇಮೆಂಟ್ ಹೆಸರಿನಲ್ಲಿ ಕನಿಷ್ಠ ಹಣ ಪಾವತಿಸಿ, ನಂತರದಲ್ಲಿ ಉಳಿದ ಹಣವನ್ನು ಇಎಂಐ ಆಗಿ ಪಾವತಿಸುವುದು ನಮ್ಮ ಮುಂದಿನ ಲೋನ್ ಅಥವಾ ಕಂತಿನ ಖರೀದಿಯನ್ನು ಮತ್ತಷ್ಟು ಸುಗುಮ ಹಾಗೂ ಸುಲಭಗೊಳಿಸುತ್ತದೆ.
ನಾವು ಖರೀದಿಸಿದ ವಸ್ತುವಿಗೆ ಅಥವಾ ಪಡೆದ ಸಾಲದ ಮೊತ್ತವನ್ನು ಕೊಟ್ಟಿರುವ ಅವಧಿಯೊಳಗೆ ಸರಿಯಾದ ಪಾವತಿ ಮಾಡದೆ ಹೋದರೆ, ಕಟ್ಟಬೇಕಿದ್ದ ಕಂತುಗಳನ್ನು ನಿಗದಿಪಡಿಸಲಾದ ದಿನಕ್ಕಿಂತ ಮುಂದೆ ಹೋಗಿ ಕಟ್ಟಿದರೆ, ಕೇವಲ ದಂಡ ಮಾತ್ರವಲ್ಲ ಅದು ನಮ್ಮ ಸಿಬಿಲ್ ಅಂಕದ ಮೇಲೂ ಭಾರೀ ಹೊಡೆತ ನೀಡುತ್ತದೆ. ಅಷ್ಟಕ್ಕೂ ಏನಿದು ಸಿಬಿಲ್ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಕೆಲವರಿಗೆ ಇಂದಿಗೂ ಈ ಸಿಬಿಲ್ ಮತ್ತು ಸಿವಿಲ್ ನಡುವೆ ಗೊಂದಲಗಳಿವೆ. ಅದು ಸಿವಿಲ್ ಅಲ್ಲ ಸಿಬಿಲ್ ಎಂಬುದು ಬಳಕೆದಾರರ ನೆನಪಿನಲ್ಲಿರಲಿ.
ಏನಿದು ಸಿಬಿಲ್?
ಲೋನ್ ಬೇಕು? ಹಣದ ಅವಶ್ಯಕತೆ ಹೆಚ್ಚಿದೆ. ಒಂದು ವಸ್ತು ಖರೀದಿಯಿಂದ ಹಿಡಿದು ಬ್ಯಾಂಕ್ನಿಂದ ಸಾಲ ಬೇಕು ಎಂದಾದರೆ ಮೊದಲು ನೋಡುವುದು ನಿಮ್ಮನಲ್ಲ ಬದಲಿಗೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು. ಉತ್ತಮ ಸಿಬಿಲ್ ಅಂಕ ಹೊಂದಿದ್ದರೆ ಮಾತ್ರ ನಿಮಗೆ ಕ್ಷಣಮಾತ್ರದಲ್ಲಿ ಸರ್ಕಾರಿ, ಖಾಸಗಿ ವಲಯದ ಬ್ಯಾಂಕುಗಳಿಂದ ಮತ್ತು ಇತರ ಕಿರುಬಂಡವಾಳ ಸಂಸ್ಥೆಗಳಿಂದ ಸಾಲ ಸಿಗುತ್ತದೆ. ಇದರ ಆಧಾರದ ಮೇಲೆಯೇ ಕ್ರೆಡಿಟ್ ಕಾರ್ಡ್‌ಗಳನ್ನು ಕೊಡಲು ಆಯಾ ಬ್ಯಾಂಕ್ಗಳು ಸಹ ಮುಂದೆ ಬರುತ್ತವೆ. ನಾವು ಅರ್ಜಿ ಸಲ್ಲಿಸಿದ ಸಾಲವನ್ನು ಅನುಮೋದಿಸಲು ಬ್ಯಾಂಕಿಂಗ್ ಸಂಸ್ಥೆಗಳು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಮ್ಮ ಪ್ರಮುಖ ಆದ್ಯತೆಯಾಗಿ ಪರಿಗಣಿಸುತ್ತವೆ. ಇದಲ್ಲದೆ, ನಿಗದಿಪಡಿಸಲಾದ ಸಿಬಿಲ್ ಸ್ಕೋರ್ ಇಲ್ಲವಾದರೆ ಹೆಚ್ಚಿನ ಬಡ್ಡಿದರದ ಸಾಲಗಳನ್ನು ನೀಡಲಾಗುತ್ತದೆ. ಇಲ್ಲವೇ ನೀವು ಸಾಲ ಪಡೆಯಲು ಅನರ್ಹರು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake
ಅಸಲಿಗೆ ಈ ಸಿಬಿಲ್ ಸ್ಕೋರ್ ಅನ್ನು ಒದಗಿಸಲು ಭಾರತದಲ್ಲಿ ಒಟ್ಟು ನಾಲ್ಕು ಕ್ರೆಡಿಟ್ ಬ್ಯೂರೋಗಳಿವೆ. ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (CIBIL), ಈಕ್ವಿಫ್ಯಾಕ್ಸ್, ಎಕ್ಸ್‌ಪೀರಿಯನ್ ಮತ್ತು ಸಿಆರ್ಐಎಫ್ (CRIF) ಹೈಮಾರ್ಕ್. ಇವುಗಳಲ್ಲಿ ಪ್ರಮುಖವಾದದ್ದು ಎಂದರೆ ಅದು ನಮಗೆಲ್ಲಾ ತಿಳಿದಿರುವ ಸಿಬಿಲ್ (CIBIL).
ಸಿಬಿಲ್ ಸ್ಕೋರ್ ಎಷ್ಟಿದರೆ ಉತ್ತಮ?
- 750ಕ್ಕಿಂತ ಹೆಚ್ಚಿನ ಸ್ಕೋರ್ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.
- 650ರಿಂದ 749 ನಡುವಿನ ಸ್ಕೋರ್ ಉತ್ತಮ ಎಂದು ಪರಿಗಣಿಸಬಹುದು.
- 500ರಿಂದ 649 ನಡುವಿನ ಸ್ಕೋರ್ ಸರಾಸರಿ (Average) ಎಂದು ಪರಿಗಣಿಸಲಾಗುತ್ತದೆ.
- 499ಕ್ಕಿಂತ ಕಡಿಮೆಯಿದ್ದರೆ ಅದನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ.
ಕುಸಿದ ಸಿಬಿಲ್ ಸ್ಕೋರ್ ಮೇಲೇತ್ತುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು
1). ಉಳಿದಿರುವ ಬಾಕಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿ: ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಅತೀ ಮುಖ್ಯ. ಹಣದ ಕೊರತೆ ಅಥವಾ ಇತರ ಕಾರಣಗಳಿಂದ ನೀವು ಪಾವತಿಸಲು ವಿಳಂಬವಾದರೆ, ನಿಮ್ಮ ಕಷ್ಟ, ದುಃಖದ ಮಾತುಗಳು, ಕಾರಣಗಳು ಲೆಕ್ಕಕ್ಕೆ ಬಾರದೆ ಸ್ಕೋರ್ ಅನ್ನು ದಿಢೀರ್ ಕುಸಿಯುವಂತೆ ಮಾಡುತ್ತದೆ. ಅಂತಿಮವಾಗಿ, ನೀವು ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸುವುದು ಒಳಿತು. ಇದಲ್ಲದೆ, ಅದನ್ನು ಮುಂದಿನ ತಿಂಗಳಿಗೆ ಮುಂದೂಡುವುದು ಅಥವಾ ದಂಡ ಕಟ್ಟುತ್ತಲೇ ಮುಂದೂಡುತ್ತೀನಿ ಎಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಂತೆಯೇ ಕುಸಿಯುತ್ತ ಹೋಗುತ್ತದೆ.
2). ಕ್ರೆಡಿಟ್ ಬಳಕೆಯ ಅನುಪಾತ: ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇ.100ರಷ್ಟು ಬಳಸದಿರುವುದು ಉತ್ತಮ. 30%ಕ್ಕಿಂತ ಕಡಿಮೆ ಬಳಸುವುದರಿಂದ ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಲಭ್ಯವಾಗುತ್ತದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ನಿಮಗೆ ದಿಢೀರ್ ಹಣದ ಅಗತ್ಯವಿದ್ದರೆ ಮತ್ತು ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದರೆ, ಅದನ್ನು ಬಿಲ್ಲಿಂಗ್ ದಿನಾಂಕಕ್ಕೂ ಮೊದಲೇ ಪಾವತಿಸಬೇಕು. ಅಕಸ್ಮಾತ್ ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಸಾಧ್ಯವಾಗದಿದ್ದರೆ ಆ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕ್ರಮೇಣವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಪ್ರತಿ ತಿಂಗಳು ಇಎಂಐ ಸರಿಯಾಗಿ ಪಾವತಿಸಿ.
ಇದನ್ನೂ ಓದಿ: ಕಾಬೂಲ್ ಹೈ…ವಾಟ್ಸ್ಆ್ಯಪ್ನಲ್ಲೇ ಮದ್ವೆಯಾದ ಯುವ ಜೋಡಿ! ಪೊಲೀಸ್ ಠಾಣೆಯಲ್ಲಿ ನಡೆಯಿತು ಹೈಡ್ರಾಮ | WhatsApp Marriage
3) ಕಡಿಮೆ ಸಾಲದ ಅವಧಿ ಬೆಸ್ಟ್: ಕೆಲವರು ಸಣ್ಣ ಸಾಲಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ಕಡಿಮೆ ಮೌಲ್ಯದ ವಸ್ತುಗಳನ್ನು ಖರೀದಿಸುತ್ತಾರೆ. ಇದಕ್ಕಾಗಿ ದೀರ್ಘಕಾಲದವರೆಗೆ ಕಂತುಗಳನ್ನು ಪಾವತಿಸುತ್ತಾರೆ. ಇದು ಅವರ ಸಿಬಿಲ್ ಸ್ಕೋರ್‌ನ ಮೇಲೂ ಪರಿಣಾಮ ಬೀರುತ್ತದೆ. ನೀವು ನಿಮ್ಮ ಬಾಕಿ ಮೊತ್ತವನ್ನು ಆದಷ್ಟು ಬೇಗ ತೀರಿಸಿದಷ್ಟೂ ನಿಮಗೇ ಉತ್ತಮ.
4) ಹೊಸ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಅವಶ್ಯ: ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಅಥವಾ ಇತರ ಹಣಕಾಸಿನ ಅಗತ್ಯಗಳಿಗಾಗಿ ಕ್ರೆಡಿಟ್ ಕಾರ್ಡ್ ಅಥವಾ ಇನ್ನೊಂದು ಬ್ಯಾಂಕಿನಿಂದ ಸಾಲಕ್ಕೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಇತರೆ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಕ್ಕಿಂತ ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ ಎಂದು ಹಣಕಾಸು ತಜ್ಞರು ಸೂಚಿಸುತ್ತಾರೆ.
5). ಹಳೆಯ ಕ್ರೆಡಿಟ್ ಕಾರ್ಡ್: ಹಲವರು ತಮ್ಮ ಕ್ರೆಡಿಟ್ ಕಾರ್ಡ್ ಕಳೆದುಹೋದ ಕಾರಣ ಅಥವಾ ಇನ್ನಿತರ ಕಾರಣಗಳಿಗಾಗಿ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಕ್ಲೋಸ್ ಅಥವಾ ಡಿ-ಆ್ಯಕ್ಟಿವೇಟ್ ಮಾಡಿಸುತ್ತಾರೆ. ಇದು ಅವರ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ನಿಮ್ಮ ಕಾರ್ಡ್ ಕಳೆದುಕೊಂಡರೆ, ಬೇರೆ ಕಾರ್ಡ್ ಪಡೆಯಬೇಕು ಮತ್ತು ಖಾತೆಯನ್ನು ಮುಂದುವರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸದಿದ್ದರೂ, ಅವುಗಳನ್ನು ಆಕ್ಟೀವ್ ಆಗಿ ಇಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ ಅಥವಾ ಸಮೋತಲನದಲ್ಲಿರುತ್ತದೆ. ಇದರಿಂದ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲದಂತಹ ಸಾಲಗಳನ್ನು ಪಡೆಯುವ ಸಾಧ್ಯತೆಗಳು ಕೂಡ ಹೆಚ್ಚಿವೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ,(ಏಜೆನ್ಸೀಸ್).
ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha