ಚೀನಾ ಸಾಗರ ಗಡಿಯಲ್ಲಿ ಅಮೆರಿಕ ನೌಕೆಗಳ ಸಮರಾಭ್ಯಾಸ; ಡ್ರ್ಯಾಗನ್​ ಹಣಿಯಲು ನಡೆದಿದೆ ಸಿದ್ಧತೆ

US warships4
Published on

ನವದೆಹಲಿ: ಭಾರತ ಸೇರಿ ವಿವಿಧ ದೇಶಗಳೊಂದಿಗೆ ಹಂಚಿಕೊಂಡಿರುವ ಗಡಿಗಳಲ್ಲಿ ಚೀನಾ ತಂಟೆಯನ್ನು ಮುಂದುವರಿಸಿರುವ ನಡುವೆಯೇ ಅಮೆರಿಕ ಸಮರಾಭ್ಯಾಸದ ರೂಪದಲ್ಲಿ ಎಚ್ಚರಿಕೆಯೊಂದನ್ನು ಆ ರಾಷ್ಟ್ರಕ್ಕೆ ನೀಡಿದೆ.

ಅಮೆರಿಕದ ಯುದ್ಧ ವಿಮಾನ ವಾಹಕ ನೌಕೆಗಳಾದ ಅಣುಶಕ್ತಿಚಾಲಿತ ಯುಎಸ್​ಎಸ್​ ನಿಮಿಟ್ಜ್​ ಹಾಗೂ ಯುಎಸ್​ಎಸ್​ ಥಿಯೋಡರ್​ ರೂಸ್​ವೆಲ್ಟ್​ ಚೀನಾದ ಸಾಗರ ಗಡಿಯಾದ ಫಿಲಿಪೈನ್ಸ್​ ಸಮುದ್ರದಲ್ಲಿ ಸಮರಾಭ್ಯಾಸ ನಡೆಸಿವೆ.

ಜೂನ್​ 21 ಹಾಗೂ ಜೂನ್​ 22ರಂದು ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಈ ಸಮರಾಭ್ಯಾಸ ನಡೆಸಲಾಗಿದೆ ಎಂದು ಅಮೆರಿಕ ನೌಕಾಧಿಕಾರಿಗಳು ಹೇಳಿದ್ದಾರೆ. ಏಕಕಾಲದಲ್ಲಿ ಹಲವು ಗುರಿಗಳನ್ನು ಬೇಧಿಸಬಲ್ಲ ಅಮೆರಿಕ ಸೇನಾ ಸಾಮರ್ಥ್ಯದ ಪ್ರದರ್ಶನ ಇದಾಗಿತ್ತು.

ಎರಡೂ ಯುದ್ಧವಿಮಾನ ವಾಹಕ ನೌಕೆಗಳಲ್ಲಿ ಸಾಗರ ಗಸ್ತು, ಆಗಸದಲ್ಲಿ ವೈಮಾನಿಕ ನಿಗಾ, ಸಮುದ್ರದಲ್ಲಿ ಕಾರ್ಯಾಚರಣೆ ಹಾಗೂ ಭೂಸೇನೆ, ವಾಯು ಹಾಗೂ ನೌಕಾ ದಳದ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶವೂ ಕೂಡ ಈ ಇದರದ್ದಾಗಿತ್ತು.

ತೀರಾ ಉದ್ವಿಗ್ನತೆ ನೆಲೆಸಿರುವ ಹಾಗೂ ಕೋವಿಡ್​ ಸಂಕಷ್ಟದ ಸಂದರ್ಭದಲ್ಲೂ ಕಾರ್ಯಾಚರಣೆ ನಡೆಸುವ ಸೇನೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು ಎಂದು ನೌಕಾಧಿಕಾರಿ ಡೌ ವೆರಿಸ್ಸಿಮೋ ಮಾಹಿತಿ ನೀಡಿದ್ದಾರೆ.

ಅತ್ತ ಜಪಾನ್​ ಕೂಡ ಚೀನಾಕ್ಕೆ ಚಾಚಿಕೊಂಡಿರುವ ತನ್ನ ಗಡಿಯಲ್ಲಿ ಕ್ಷಿಪಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಇತ್ತ ಅಮೆರಿಕ ಕೂಡ ಸಮರಾಭ್ಯಾಸ ನಡೆಸಿರುವುದು ಚೀನಾಕ್ಕೆ ಭಾರಿ ಎಚ್ಚರಿಕೆಯನ್ನು ನೀಡಿದ ನಡೆಗಳೆಂದು ವಿಶ್ಲೇಷಿಸಲಾಗಿದೆ. ಒಟ್ಟಿನಲ್ಲಿ ಡ್ರ್ಯಾಗನ್​ ರಾಷ್ಟ್ರವನ್ನು ಹಣಿಯಲು ಹಲವು ದೇಶಗಳು ಸಿದ್ಧತೆಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net