ಪಾಕ್​ ರಾಯಭಾರ ಕಚೇರಿ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯಲು ಸೂಚನೆ ಕೊಟ್ಟಿದ್ದೇಕೆ ಭಾರತ?

Pak High commission
Published on

ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯುವಂತೆ ಭಾರತ ಸೂಚನೆ ನೀಡಿದೆ.

ಇದಷ್ಟೇ ಅಲ್ಲ, ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲೂ ಕೂಡ ತನ್ನ ಅರ್ಧದಷ್ಟು ವಾಪಸ್​ ಭಾರತಕ್ಕೆ ಕರೆಯಿಸಿಕೊಳ್ಳುವುದಾಗಿ ಕೂಡ ಹೇಳಿದೆ.

ಕೆಲ ದಿನಗಳ ಹಿಂದಷ್ಟೇ ಇಸ್ಲಾಮಾಬಾದ್​ ಭಾರತೀಯ ರಾಯಭಾರ ಕಚೇರಿಯ ಇಬ್ಬರನ್ನು ಅಲ್ಲಿನ ಪೊಲೀಸರು ಬಂದೂಕು ತೋರಿಸಿ ಅಪಹರಿಸಿದ್ದರು. ಬಳಿಕ ರಸ್ತೆ ಅಪಘಾತದ ಕೇಸ್​ನಲ್ಲಿ ವಿಚಾರಣೆ ನಡೆಸಿದ್ದಾಗಿ ನೆಪ ಹೇಳಿದ್ದರು. ಇವರನ್ನು ಎರಡು ದಿನಗಳ ಹಿಂದಷ್ಟೇ ಭಾರತ ವಾಪಸ್​ ಕರೆಯಿಸಿಕೊಂಡಿತ್ತು.

ಇದಕ್ಕೂ ಮುನ್ನ ಬೇಹುಗಾರಿಕೆಯಲ್ಲಿ ತೊಡಗಿದ್ದ ನವದೆಹಲಿಯಲ್ಲಿರುವ ಪಾಕ್​ ರಾಯಭಾರ ಕಚೇರಿಯ ಮೂವರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕ್​ ಸುಳ್ಳು ಕೇಸ್​ ದಾಖಲಿಸಿ, ಅವರ ಮೇಲೆ ದೌರ್ಜನ್ಯ ಎಸಗಿತ್ತು.

ಪಾಕ್​ ಅಧಿಕಾರಿಗಳು ಗೂಢಚಾರ ಕೃತ್ಯ ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರಿಂದ ಅವರನ್ನು ದೇಶದಿಂದಲೇ ಹೊರಗೆ ಕಳುಹಿಸಲು ಭಾರತೀಯ ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಹೀಗಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಅರ್ಧದಷ್ಟು ಇಳಿಕೆ ಮಾಡುವಂತೆ ಸೂಚಿಸಿದೆ.

ಅಂತೆಯೇ ಇಸ್ಲಾಮಾಬಾದ್​ನಲ್ಲಿರುವ ತನ್ನ ದೂತಾವಾಸದ ಸಿಬ್ಬಂದಿಯ ಪ್ರಮಾಣವನ್ನು ಅರ್ಧಕ್ಕೆ ಇಳಿಸಲಿದೆ ಎಂದು ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net