ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ...!

soumya
Published on

ನವದೆಹಲಿ: ಇಷ್ಟು ದಿನ ಕರೊನಾ ವೈರಸ್​ ನಮ್ಮೂರಿಗೆ ಬಂದಿಲ್ಲ ಎಂದು ಜನ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಈಗ ಮಹಾನಗರಗಳಲ್ಲಿ ನಮ್ಮ ರೋಡ್​ಗೆ ಇನ್ನೂ ಬಂದಿಲ್ಲ ಎಂದುಕೊಳ್ಳಬೇಕಷ್ಟೇ..! ಇನ್ನು ಕೆಲ ದಿನ ಕಳೆದರೆ, ಅಕ್ಕಪಕ್ಕದ ಮನೆಗೆ ಬಾರದಿದ್ದರೆ ಸಾಕು ಎಂದು ನಿರೀಕ್ಷಿಸಬೇಕಾಗುತ್ತೇನೋ...

ಭಾರತದಲ್ಲಿ ಕರೊನಾ ಸಂಕಷ್ಟ ಇನ್ನೂ ಉಚ್ಛ್ರಾಯ ಸ್ಥಿತಿಗೆ ತಲುಪಿಲ್ಲ. ಇನ್ನು ಇಳಿಮುಖವಾಗಿ ಕೊನೆಯಾಗೋದು ಯಾವಾಗ ಎಂದು ಈಗಲೇ ಹೇಳೋದು ಅಸಾಧ್ಯದ ಮಾತು. ಜತೆಗೆ, ಎರಡನೇ ಅಲೆಗೆ ಬೇರೆ ಸಜ್ಜಾಗಬೇಕಿದೆ ಎಂದು ತಜ್ಞರು ಹೇಳುತ್ತಾರೆ.

ಆದರೆ, ಇದೆಲ್ಲಕ್ಕಿಂತ ಮುಖ್ಯವಾದುದೆಂದರೆ ಕರೊನಾ ಮುಗಿದರೆ ಎಲ್ಲವೂ ಮುಗಿದಂತಲ್ಲ. ಇದಕ್ಕಿಂತಲೂ ದೊಡ್ಡ ಸಾಂಕ್ರಾಮಿಕ ರೋಗಗಳು ನಮ್ಮನ್ನು ಕಾಡಬಹುದು. ಅದಕ್ಕೆ ಹೇಗೆ ಸಜ್ಜುಗೊಳ್ಳಬೇಕು ಎಂಬುದನ್ನು ಕರೊನಾದಿಂದ ಪಾಠ ಕಲಿಯಬೇಕಷ್ಟೇ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್​.

ಕರೊನಾದಿಂದಲೇ ಎಲ್ಲವೂ ಕೊನೆಯಾಗುತ್ತೆ ಎಂದೇನಿಲ್ಲ, ಮುಂದೆ ಬರಬಹುದಾದ ಇಂಥದ್ದೇ ಹಲವು ಸಂಕಷ್ಟಗಳಿಗೆ ನಾವು ತಯಾರಾಗಬೇಕು. ಅದು ಹೇಗೆ? ಅದರ ಸ್ವರೂಪ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕರೊನಾ ನಮಗೊಂದು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಸೌಮ್ಯಾ ಹೇಳುತ್ತಾರೆ.

ಈಗಾಗಲೇ ಕರೊನಾ ನಿಗ್ರಹಿಸಲು ವಿಶ್ವದಲ್ಲಿ 220ಕ್ಕೂ ಅಧಿಕ ಲಸಿಕೆಗಳು ಸಜ್ಜಾಗುತ್ತಿವೆ. ಅದರಲ್ಲಿ 12 ಲಸಿಕೆಗಳು ಮಾನವರ ಮೇಲೆ ಒಂದನೇ ಮತ್ತು 2ನೇ ಹಂತದ ಪ್ರಯೋಗದಲ್ಲಿವೆ. ಎರಡನೇ ಹಂತದ ಪ್ರಯೋಗದ ಫಲಿತಾಂಶ ಈ ವರ್ಷದ ಕೊನೆಗೆ ತಿಳಿಯಬಹುದು ಎಂದು ಸೌಮ್ಯಾ ಮಾಹಿತಿ ನೀಡಿದ್ದಾರೆ.

ಕರೊನಾದಿಂದಾಗಿ ಇತರ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಬೀಳಬಾರದು. ಅದರಲ್ಲೂ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ನಿರಾತಂಕವಾಗಿ ನಡೆಯಬೇಕು ಎಂಬುದು ಡಾ. ಸೌಮ್ಯಾ ಸ್ವಾಮಿನಾಥನ್​ ಸಲಹೆ.

ಕರೊನಾ ವ್ಯಾಪಿಸುವ ಪ್ರಮಾಣ ಇನ್ನಷ್ಟು ದಿನ ಏರಿಳಿತಗಳನ್ನು ಕಾಣಬಹುದು. ಇದನ್ನು ತಡೆಗಟ್ಟಲು ನಾವು ಯಾವ ರೀತಿ ಸ್ಪಂದಿಸುತ್ತೇವೆ ಎಂಬುದರ ಮೇಲೆ ಇದು ಅವಲಂಬಿಸಿದೆ. ವ್ಯಕ್ತಿಗತ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಇದರ ತಡೆಗೆ ಇರುವ ಬಹುಮುಖ್ಯ ಸಾಧನವಾಗಿದೆ ಎಂದು ಡಾ. ಸೌಮ್ಯಾ ಸ್ವಾಮಿನಾಥನ್​ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net