ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ

fabiflu
Published on

ನವದೆಹಲಿ: ಮಾರಕ ಕರೊನಾಗೆ ದೇಶಿಯ ಔಷಧ ಸಜ್ಜಾಗಿದೆ. ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ಲೆನ್​ ಮಾರ್ಕ್​ ಕಂಪನಿ ಈ ಔಷಧ ತಯಾರಿಸಿದೆ. ಕೋವಿಡ್​ ರೋಗಿಗಳ ಮೇಲೆ ಪ್ರಯೋಗಿಸಲು ಕೇಂದ್ರ ಸರ್ಕಾರ ಅನುಮತಿಯನ್ನೂ ನೀಡಿದೆ.

ಗ್ಲೆನ್​ ಮಾರ್ಕ್​ ಫಾರ್ಮಾಸುಟಿಕಲ್ಸ್​​ ಕಂಪನಿ ಫೆಬಿಫ್ಲೂ ಹೆಸರಿನಲ್ಲಿ ಔಷಧ ತಯಾರಿಸಿದ್ದು, ಕೊರೊನಾದಿಂದ ಲಘು ಹಾಗೂ ಸಾಧಾರಣ ಸೋಂಕಿಗೆ ಒಳಗಾದವರಿಗೆ ಇದನ್ನು ನೀಡಬಹುದು ಎಂದು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಪರವಾನಗಿ ನೀಡಿದ್ದಾರೆ.

ಫೆಬಿಫ್ಲೂ ಭಾರತದ ಮೊದಲ ಬಾಯಿಯ ಮೂಲಕ ತೆಗೆದುಕೊಳ್ಳುವ ಕರೊನಾ ನಿವಾರಕ ಔಷಧ ಎಂಬ ಹೆಗ್ಗಳಿಕೆ ಪಡೆದಂತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ದೇಶದಲ್ಲಿ ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಈ ಔಷಧ ಬಳಕೆಗೆ ಅನುಮತಿ ಸಿಕ್ಕಿರುವುದು ಭಾರಿ ಪ್ರಯೋಜನವಾದಂತಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗ್ಲೆನ್​ ಸಲ್ಡಾನ್ಹಾ ಹೇಳಿದ್ದಾರೆ.

ಈ ಔಷಧ ಮಾತ್ರವಲ್ಲದೇ. ಇನ್ನೂ ಹಲವು ಭಾರತೀಯ ಕಂಪನಿಗಳು ಕರೊನಾ ಲಸಿಕೆ ಕಂಡು ಹಿಡಿಯುವಲ್ಲಿ ತೊಡಗಿವೆ. ಇನ್ನು ಕೆಲ ತಿಂಗಳಲ್ಲಿ ಮಾನವರ ಮೇಲೆ ಪ್ರಯೋಗಕ್ಕೆ ಸಜ್ಜಾಗಲಿವೆ.

ಫವಿಪಿರಾವಿರ್​ ಜಪಾನ್​ನಲ್ಲಿ ಶೀತಜ್ವರ ತಡೆಯಲು ಬಳಕೆಯಾಗುವ ವೈರಸ್​ ನಿಯಂತ್ರಕ ಔಷಧವಾಗಿದೆ. ಇದನ್ನು ಅವಿಗಾನ್​ ಅಥವಾ ಅಬಿಗಾನ್​ ಎಂದು ಕರೆಯಲಾಗುತ್ತದೆ. ಇದನ್ನೇ ಆಧರಿಸಿ ಫೆಭಿಫ್ಲೂ ತಯಾರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net