ಕರೊನಾದ ಸಾವಿನ ಕುಣಿಕೆಯಿಂದ ಪಾರು ಮಾಡುತ್ತಿದೆ ಈ ಔಷಧ...!

Dexa
Published on

ನವದೆಹಲಿ: ಕರೊನಾ ವೈರಸ್​ನಿಂದ ಉಂಟಾಗುವ ಕೋವಿಡ್​ ಕಾಯಿಲೆಯಿಂದ ಕಾಪಾಡಲು ಸದ್ಯ ಹಲವು ಔಷಧಗಳನ್ನು ಬಳಸಲಾಗುತ್ತಿದೆ. ಈ ಪಟ್ಟಿಗೆ ಈಗ ಇನ್ನೊಂದು ಔಷಧ ಸೇರ್ಪಡೆಯಾಗಿದೆ.

ಕರೊನಾದಿಂದಾಗಿ ತೀವ್ರ ಅನಾರೋಗ್ಯಕ್ಕೆ ಈಡಾದವರನ್ನು ಸಾವಿನ ಕುಣಿಕೆಯಿಂದ ಪಾರು ಮಾಡಬಲ್ಲುದು. ಉಸಿರಾಟದ ತೀವ್ರ ತೊಂದರೆಯಿಂದ ಬಳುತ್ತಿರುವವರನ್ನು ಹಾಗೂ ಈಗಾಗಲೇ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದು ಬ್ರಿಟನ್​ ತಜ್ಞರು ಹೇಳಿದ್ದಾರೆ.

ಈ ಔಷಧವನ್ನು ಬಳಸಿದ ಮುಕ್ಕಾಲು ಪಾಲು ರೋಗಿಗಳು ಸಾವಿನಿಂದ ಪಾರಾಗಿದ್ದಾರೆ ಎಂದು ಅಧ್ಯಯನ ವರದಿಗಳು ಹೇಳಿವೆ. ಬ್ರಿಟನ್​ನಲ್ಲಿ ಮಾರ್ಚ್​ನಿಂದಲೇ ಈ ಔಷಧದ ಬಳಕೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿತ್ತು. ಐದು ಸಾವಿರಕ್ಕೂ ಅಧಿಕ ಕೋವಿಡ್​ ಪೀಡಿತರು ಬದುಕುಳಿದಿದ್ದಾರೆ ಎಂದು ವರಿಯಾಗಿದೆ.

ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಾವಿನ ಪ್ರಮಾಣವನ್ನು ಮುಕ್ಕಾಲು ಪಾಲು ಕಡಿಮೆಗೊಳಿಸಿದರೆ, ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿರುವವರ ಸಾವಿನ ಸಂಭಾವ್ಯತೆಯನ್ನು ಶೇ.20 ಕಡಿಮೆ ಮಾಡಿದೆ ಎಂದು ಗೊತ್ತಾಗಿದೆ.

ಮನೆಯಲ್ಲಿದ್ದುಕೊಂಡೇ ಕೋವಿಡ್​ನಿಂದ ಗುಣಮುಖರಾಗಬಹುದು. ಆಸ್ಪತ್ರೆಗೆ ದಾಖಲಾಗುವವರು ಕೂಡ ಚೇತರಿಕೆ ಕಾಣುತ್ತಾರೆ. ಅದರಲ್ಲೂ ಕೃತಕವಾಗಿ ಆಮ್ಲಜನಕ ಪೂರೈಕೆ ಅಗತ್ಯವಿರುವವಿಗೆ ಈ ಔಷಧ ಸಂಜೀವಿನಿಯಾಗಿದೆ ಎಂದೇ ಹೇಳಲಾಗಿದೆ.

ಜಗತ್ತಿನಾದ್ಯಂತ ಲಭ್ಯವಿರುವ ಈ ಔಷಧದ ಹೆಸರು ಡೆಕ್ಸಾಮೆಥಾಸೋನ್​. 1960 ರಿಂದಲೂ ವಿವಿಧ ಕಾಯಿಲೆಗಳಿಗೆ ಇದನ್ನು ಬಳಸಲಾಗುತ್ತಿದೆ. ಅಸ್ತಮಾ, ಶ್ವಾಸಕೋಶದ ತೊಂದರೆ, ಚರ್ಮ ಕಾಯಿಲೆ, ಅಲರ್ಜಿ ಮೊದಲಾದವುಗಳಿಗೆ ಇದನ್ನು ಶಿಫಾರಸು ಮಾಡಲಾಗುತ್ತಿದೆ. ಕರೊನಾ ವೈರಸ್​ ತಡೆಯಲು ದೇಹದ ರೋಗ ಪ್ರತಿರೋಧ ಶಕ್ತಿ ಕೆಲವೊಮ್ಮೆ ತೀವ್ರವಾಗಿ ಪ್ರತಿಸ್ಪಂದಿಸುತ್ತದೆ. ಇದು ಮಾರಕವಾಗಬಹುದು. ಇದರಿಂದಾಗುವ ಹಾನಿಯನ್ನು ಇದು ತಡೆಯುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಜತೆಗೆ, ಇದರ ಕಡಿಮೆ ಬೆಲೆ ಕಡಿಮೆಯಾಗಿರುವುದರಿಂದ ಎಲ್ಲರೂ ಇದನ್ನು ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net