

ಬೆಂಗಳೂರು: ಕರೊನಾ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ಡೌನ್ ತೆರವಾಗುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆಗಳಿಗೂ ಅವಕಾಶ ದೊರೆಯಲಿದೆ ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಹಲವು ರಾಜ್ಯ ಶಿಕ್ಷಣ ಮಂಡಳಿಗಳು ಹಾಗೂ ಸಂಸ್ಥೆಗಳು ಪರೀಕ್ಷೆ ದಿನಾಂಕ ಪ್ರಕಟಿಸಿದ್ದವು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ನಿಗದಿಯಂತೆ ಪರೀಕ್ಷೆ ನಡೆಸುವುದು ಸಾಧ್ಯವೇ ಎಂಬ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬೇಡ ಎಂದು ದೊಡ್ಡ ಕೂಗೆದ್ದಿದೆ. ಈ ನಡುವೆ ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಹಲವು ವಿಶ್ವವಿದ್ಯಾಲಯಗಳು ಕೂಡ ಇದೇ ಹಾದಿ ಹಿಡಿದಿವೆ.
ಅಂತೆಯೇ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಅಂತಿಮ ವರ್ಷ ಹಾಗೂ ಸೆಮಿಸ್ಟರ್ಗಳ ಆಫ್ಲೈನ್ ಪರೀಕ್ಷೆಗಳನ್ನು ರದ್ದುಪಡಿಸಿದೆ.
ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪರಿಸ್ಥಿತಿ ಪೂರಕವಾಗಿಲ್ಲ. ಹೀಗಾಗಿ ಆನ್ಲೈನ್ ಪರೀಕ್ಷೆ ಹಾಗೂ ಅಸೈನ್ಮೆಂಟ್ ಆಧಾರದಲ್ಲಿ ಮೌಲ್ಯಮಾಪನ ನಡೆಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಆದಷ್ಟು ಬೇಗ ಆನ್ಲೈನ್ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ವಿವಿ ಸೂಚಿಸಿದೆ.
ವಿಶ್ವವಿದ್ಯಾಲಯವು ಜೂನ್ 1ರಿಂದ 15ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಿತ್ತು. ಬಳಿಕ ಅದನ್ನು ಜೂನ್ 30ರವರೆಗೆ ವಿಸ್ತರಿಸಿದೆ. ಜುಲೈ 1ರಿಂದ ನಡೆಸಲುದ್ದೇಶಿಸಲಾಗಿದ್ದ ಆಫ್ಲೈನ್ ಪರೀಕ್ಷೆಯನ್ನು ರದ್ದುಪಡಿಸುವುದಾಗಿ ಘೋಷಿಸಿದೆ.