

ಹೈದರಾಬಾದ್: ಚಿತ್ರನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದ ಸುದ್ದಿ ಇಂದು ಎಲ್ಲೆಡೆ ವ್ಯಾಪಿಸಿರುವಾಗಲೇ ಹೃದಯಾಘಾತದಿಂದಾಗಿ ಪತ್ರಕರ್ತರೊಬ್ಬರು ಸಾವಿಗೀಡಾದ ಸುದ್ದಿ ಹೊರಬಿದ್ದಿದೆ.
ಉರ್ದು ಮ್ಯಾಗಜಿನ್ ಸಿಯಾಸತ್ನ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್ (60) ಸಾವಿಗೀಡಾದ ಪತ್ರಕರ್ತ. ಕ್ರಾಂತಿಕಾರಿ ಕವಿ ಗದ್ದರ್ (ಗುಮ್ಮಡಿ ವಿಠಲ್ ರಾವ್) ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಅಲಿ ಖಾನ್ ಅಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಹೈದರಾಬಾದ್ನ ಅಲ್ವಾಲ್ನ ಭೂದೇವಿನಗರದ ಮಹಾಬೋಧಿ ವಿದ್ಯಾಲಯದಲ್ಲಿ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಗದ್ದರ್ ಅಂತ್ಯಸಂಸ್ಕಾರ ನಡೆದಿತ್ತು. ಅಲ್ಲಿಗೆ ತೆರಳಿ ಹೃದಯಾಘಾತಕ್ಕೆ ಒಳಗಾಗಿ ಎದೆನೋವಿನಿಂದ ಬಳಲುತ್ತಿದ್ದ ಅಲಿ ಖಾನ್ ಅವರನ್ನು ಹೈದರಾಬಾದ್ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.