

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಸ್ಮರಣಾರ್ಥ ದೇವಸ್ಥಾನವೊಂದನ್ನು ನಿರ್ಮಿಸಿ, ನಿತ್ಯವೂ ಆಕೆಯ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವಿಶೇಷ ಪ್ರಕರಣವೊಂದು ಇಲ್ಲಿದೆ. ಉತ್ತರಪ್ರದೇಶದ ಫತೇಪುರ್ ಎಂಬಲ್ಲಿ ಇಂಥದ್ದೊಂದು ದೇವಸ್ಥಾನವಿದೆ.
ರಾಮ್ಸೇವಕ್ ಎಂಬಾತ ತನ್ನ ಪತ್ನಿ ಮಾಯಾ ಎಂಬಾಕೆಯ ಸ್ಮರಣಾರ್ಥ ಈ ಸಣ್ಣ ದೇವಸ್ಥಾನ ನಿರ್ಮಿಸಿ ನಿತ್ಯ ಆಕೆಯ ಮೂರ್ತಿಗೆ ಪೂಜೆ ಮಾಡುತ್ತಿದ್ದಾನೆ. ಈತನ ಪತ್ನಿ 2020ರಲ್ಲಿ ಕೋವಿಡ್ 19ನಿಂದಾಗಿ ಮೃತಪಟ್ಟಿದ್ದಳು. ಆಕೆಯ ಸಾವಿನ ಬಳಿಕ ಈತ ಒಂಟಿತನ ಅನುಭವಿಸಿ ಅನಾರೋಗ್ಯಗೊಂಡಿದ್ದ. ಹೀಗಾಗಿ ಆಕೆಯ ಸ್ಮರಣಾರ್ಥ ಒಂದು ಮೂರ್ತಿಯನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದ.
ತನ್ನ ಮನೆಯಿಂದ 2 ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಆರು ತಿಂಗಳ ಹಿಂದೆ ಈತ ಪತ್ನಿಯ ಮೂರ್ತಿಯನ್ನು ಸ್ಥಾಪಿಸಿದ್ದ. ಮಾತ್ರವಲ್ಲ, ಅದನ್ನು ಬರೀ ಮೂರ್ತಿ ಎಂದು ಯಾರಾದರೂ ಹೇಳಿದರೆ ತೀವ್ರ ಬೇಸರಕ್ಕೆ ಒಳಗಾಗುವಷ್ಟು ಅದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ. ಆರಂಭದಲ್ಲಿ ಈತನ ಈ ಕಾರ್ಯವನ್ನು ನೋಡಿ ಗ್ರಾಮಸ್ಥರು ತಮಾಷೆ ಮಾಡುತ್ತಿದ್ದರೂ, ಈಗೀಗ ಈತನ ಪ್ರೀತಿ ಹಾಗೂ ಅರ್ಪಣಾ ಮನೋಭಾವವನ್ನು ನೋಡಿ ಗೌರವಿಸಲಾರಂಭಿಸಿದ್ದಾರಂತೆ.
ಪತ್ನಿಯ ಮೂರ್ತಿಗೆ ದಿನವೂ ಬೆಳಗ್ಗೆ ಪೂಜೆ ಮಾಡುವ ಈತ ಅಲ್ಲೇ ಒಂದಷ್ಟು ಕಾಲ ಕಳೆಯುತ್ತಾನೆ. ಮೂರ್ತಿಯ ಪಕ್ಕದಲ್ಲಿ ಕುಳಿತು ಮಾತನಾಡುತ್ತಿರುತ್ತಾನೆ, ಮಾತ್ರವಲ್ಲ ಅಲ್ಲೇ ಸಮೀಪದಲ್ಲೇ ಕುಳಿತು ಆಹಾರ ಸೇವಿಸುತ್ತಾನೆ. ಸಾಧ್ಯವಾದಷ್ಟೂ ಸಮಯವನ್ನು ಅಲ್ಲೇ ಕಳೆಯುವ ಈತ, ಅಲ್ಲಿ ಹತ್ತಿರ ಸುಳಿದಾಡುವ ಜನರಿಗೆ ಕುಡಿಯಲು ನೀರು ಸಿಗಲಿ ಎಂದು ಹ್ಯಾಂಡ್ ಪಂಪ್ ಕೂಡ ಅಳವಡಿಸಿದ್ದಾನೆ.