

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿಕೊಂಡಾಗಿನಿಂದ ಹೊಸ ಹೊಸ ಕ್ರಮಕೈಗೊಳ್ಳುತ್ತಿರುವ ಎಲಾನ್ ಮಸ್ಕ್, ಇದೀಗ ಅದನ್ನು 'ಎಕ್ಸ್' ಆಗಿಸಿದಾಗಿನಿಂದ ಈ ಮೈಕ್ರೋ ಬ್ಲಾಗಿಂಗ್ ಸೈಟನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ, ಇಂದು ವಿಶೇಷ ಹಾಗೂ ಕೆಲವರು ಹುಬ್ಬೇರಿಸುವಂಥ ಘೋಷಣೆಯೊಂದನ್ನು ಮಾಡಿದ್ದಾರೆ.
ಬಹಳಷ್ಟು ಉದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಇನ್ನು ಕೆಲವರು ತಮ್ಮ ಅನಿಸಿಕೆಗಳನ್ನು ಉದ್ಯೋಗದಾತ ಕಂಪನಿಗಳ ಅನಿಸಿಕೆ ಎಂದು ಯಾರೂ ತಪ್ಪು ಭಾವಿಸಬಾರದು ಅಥವಾ ತಮ್ಮ ಪೋಸ್ಟ್ಗಳಿಂದ ತೊಂದರೆ ಎದುರಾಗಬಾರದು ಎಂದು 'views are personal' ಎಂಬ ಸಾಲನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಯೋದಲ್ಲಿ ಹಾಕಿಕೊಂಡಿರುತ್ತಾರೆ. ಬಹುಶಃ ಇದನ್ನೆಲ್ಲ ಗಮನಿಸಿಯೇ ಏನೋ ಎಲಾನ್ ಮಸ್ಕ್ ಇದೀಗ ಹೊಸದೊಂದು ಘೋಷಣೆ ಮಾಡಿದ್ದಲ್ಲದೆ ಭರವಸೆಯನ್ನೂ ನೀಡಿದ್ದಾರೆ.
'ಈ ಪ್ಲ್ಯಾಟ್ಫಾರ್ಮ್ನಲ್ಲಿ ಏನನ್ನಾದರೂ ಪೋಸ್ಟ್ ಮಾಡುವ ಅಥವಾ ಲೈಕ್ ಮಾಡುವ ಕಾರಣದಿಂದಾಗಿ ನಿಮ್ಮ ಉದ್ಯೋಗದಾತರಿಂದ ನಿಮಗೆ ಅನ್ಯಾಯವಾಗಿದ್ದರೆ, ನಾವು ನಿಮ್ಮ ಕಾನೂನು ಶುಲ್ಕ ಭರಿಸಲು ಧನಸಹಾಯ ಮಾಡುತ್ತೇವೆ' ಎಂಬುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಮಾತ್ರವಲ್ಲದೆ, 'ಇದಕ್ಕೆ ಮಿತಿ ಇಲ್ಲ' ಎನ್ನುವ ಮೂಲಕ ಎಷ್ಟು ಖರ್ಚಾದರೂ ಕೊಡುತ್ತೇವೆ ಎಂದು ಪರೋಕ್ಷವಾಗಿ ಹೇಳಿರುವ ಮಸ್ಕ್, 'ದಯವಿಟ್ಟು ನಮಗೆ ತಿಳಿಸಿ' ಎಂದೂ ಕೇಳಿಕೊಂಡಿದ್ದಾರೆ.
ಯಾರೂ ನಿರೀಕ್ಷೆ ಮಾಡಿರದ, ಅದರಲ್ಲೂ ಇದುವರೆಗೆ ಯಾವ ಸೋಷಿಯಲ್ ಮೀಡಿಯಾದವರೂ ಘೋಷಿಸಿರದ ಇಂಥ ಒಂದು ಭರವಸೆಯನ್ನು ಎಲಾನ್ ಮಸ್ಕ್ ನೀಡಿರುವುದು ಭಾರಿ ಅಚ್ಚರಿ ಮೂಡಿಸಿದ್ದು, ಅವರ ಈ ಪೋಸ್ಟ್ ಭರ್ಜರಿ ಪ್ರತಿಕ್ರಿಯೆ ಪಡೆಯುವ ಮೂಲಕ ವೈರಲ್ ಕೂಡ ಆಗಿದೆ.