ಸ್ಪಂದನಾ ಪಾರ್ಥಿವ ಶರೀರದ ಪೋಸ್ಟ್​ ಮಾರ್ಟಂ ಮುಕ್ತಾಯ; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್ಸ್​

spandana vijay
Published on

ಬೆಂಗಳೂರು: ಬ್ಯಾಂಕಾಕ್​ನಲ್ಲಿ ಇಂದು ಸಾವಿಗೀಡಾಗಿರುವ ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಆ ಕುರಿತ ಲೇಟೆಸ್ಟ್ ಅಪ್​ಡೇಟ್ಸ್​ ಹೊರಬಿದ್ದಿದೆ. ಸ್ಪಂದನಾ ದೊಡ್ಡಪ್ಪ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ಸ್ಪಂದನಾ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಗಿದಿದೆ. ವಿದೇಶಾಂಗ ಸಚಿವಾಲಯದ ಶಿಷ್ಟಾಚಾರ ಮುಗಿದ ನಂತರ ನಾಳೆ ಅಲ್ಲಿಂದ ಭಾರತಕ್ಕೆ ಶರೀರ ರವಾನೆ ಮಾಡಲಾಗುತ್ತದೆ. ನಾಳೆ ಅಥವಾ ನಾಡಿದ್ದು ಪಾರ್ಥಿವ ಶರೀರ ರಾಜ್ಯಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.

ನಾವ್ಯಾರೂ ಅಲ್ಲಿಗೆ ಹೋಗಲು ಆಗಿಲ್ಲ. ಮೂರರಿಂದ ನಾಲ್ಕು ಜನ ವಿಜಯರಾಘವೇಂದ್ರ ಜೊತೆ ಇದ್ದಾರೆ. ಅವರು ರಾಜ್ಯಕ್ಕೆ ಬಂದ ನಂತರ ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂಬ ಕುರಿತು ನಿರ್ಧಾರ ಮಾಡಲಿದ್ದೇವೆ. ಅಂತ್ಯಕ್ರಿಯೆ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ಬೆಂಗಳೂರು ಅಥವಾ ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ಮಾಡುವ ಕುರಿತಂತೆ ವಿಜಯರಾಘವೇಂದ್ರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net