

ಬೆಂಗಳೂರು: ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರಗೆ 'ಕಮಾನ್ ಕಮಾನ್' ಎಂದು 'ಕಾಮಣ್ಣ' ನೆನಪಿನ ಬಾಣ ಬಿಟ್ಟಿದ್ದಾನೆ. ಅರ್ಥಾತ್, ಅವರು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ 'ಅನಂತನ ಅವಾಂತರ' ಸಿನಿಮಾದ ಹಾಡಿನ ದೃಶ್ಯದ 'ಕಾಮಣ್ಣ' ಇದೀಗ ಅವರಿಗೆ ನೆನಪಾಗಿದ್ದಾನೆ.
ಕಾಶಿನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಅನಂತನ ಅವಾಂತರ' ಸಿನಿಮಾ 1989ರಂದು ಇದೇ ದಿನ ಅಂದರೆ ಜನವರಿ 5ರಂದು ತೆರೆಕಂಡಿತ್ತು. ಕಾಶಿನಾಥ್ ನಿರ್ದೇಶನದ ಜತೆಗೆ ಅಭಿನಯವನ್ನೂ ಮಾಡಿರುವ ಈ ಚಿತ್ರದಲ್ಲಿ ಅಂಜಲಿ, ಅರವಿಂದ್, ದಿನೇಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು.
ಈ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸುವ ಜತೆಗೆ ಸಾಹಿತ್ಯವನ್ನೂ ರಚಿಸಿದ್ದರು. ಅವರೊಂದಿಗೆ ವಿ.ಮನೋಹರ್ ಹಾಗೂ ಉಪೇಂದ್ರ ಕೂಡ ಸಾಹಿತ್ಯ ಬರೆದಿದ್ದರು. ಆ ಪೈಕಿ 'ಕಮಾನ್ ಕಮಾನ್ ಕಾಮಣ್ಣ..' ಗೀತೆಯ ಸಾಹಿತ್ಯ ಉಪೇಂದ್ರ ಅವರದ್ದು.
ಈ ಹಾಡಿನ ದೃಶ್ಯದಲ್ಲಿ ಕಾಮಣ್ಣ ಅಂದರೆ ಮನ್ಮಥನಾಗಿ ಯಾರು ಅಭಿನಯಿಸುವುದು ಎಂಬ ಯೋಚನೆಯಲ್ಲಿದ್ದಾಗ ಕಾಶಿನಾಥ್ ಅವರು, ಹಾಡಿನ ಸಾಹಿತ್ಯ ಬರೆದಿದ್ದ ಉಪ್ಪಿಗೇ ಕಾಮಣ್ಣನಾಗುವಂತೆ ಸೂಚಿಸಿದ್ದರು. ಹೀಗಾಗಿ ಆ ಚಿತ್ರದಲ್ಲಿ ಆಧುನಿಕ ಮನ್ಮಥನಾಗಿ ಉಪೇಂದ್ರ ಕಾಣಿಸಿಕೊಂಡಿದ್ದರು.
ಹೀಗೆ 33 ವರ್ಷಗಳ ಹಿಂದೆ ತಾವು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ ನೆನಪನ್ನು ಸ್ವತಃ ಉಪೇಂದ್ರ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕಾಮಣ್ಣನಾಗಿ ಕಾಣಿಸಿಕೊಂಡ ಫೋಟೋ ಜತೆ, ತಮ್ಮ ಗುರು ಕಾಶಿನಾಥ್ ಅವರರೊಂದಿಗೆ ಇರುವ ಫೋಟೋ ಕೂಡ ಪೋಸ್ಟ್ ಮಾಡಿಕೊಳ್ಳುವ ಮೂಲಕ ಅಂದಿನ ಅನಂತನ ಅವಾಂತರದಲ್ಲಿನ ತಮ್ಮ ಮನ್ಮಥನ ಅವತಾರವನ್ನು ಉಪ್ಪಿ ಸ್ಮರಿಸಿಕೊಂಡಿದ್ದಾರೆ.