More

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

    ಪ್ರಜಾಕೀಯದಿಂದಾಗಿ ಉಪೇಂದ್ರ ಚಿತ್ರರಂಗದಿಂದ ದೂರವಾಗುತ್ತಿದ್ದಾರಾ? ಇಂಥದ್ದೊಂದು ಭಯ ಅವರ ಅಭಿಮಾನಿಗಳಲ್ಲಿದೆ. ಕಾರಣ, ಉಪೇಂದ್ರ ಅವರು ಇತ್ತೀಚೆಗೆ ತಮ್ಮ ಚಿತ್ರಗಳಿಂದ ಸುದ್ದಿಯಾಗಿದ್ದಕ್ಕಿಂತ ಪ್ರಜಾಕೀಯದಿಂದ ಸುದ್ದಿಯಾಗಿದ್ದೇ ಹೆಚ್ಚು. ಹಾಗಾಗಿ ಉಪೇಂದ್ರ ಎಲ್ಲಿ ಚಿತ್ರರಂಗವನ್ನು ಬಿಟ್ಟು ಫುಲ್​ಟೈಮ್ ಪ್ರಜಾಕಾರಣದಲ್ಲಿ ತೊಡಗಿಸಿಕೊಂಡುಬಿಡುತ್ತಾರೋ ಎಂಬ ಭಯ ಅವರ ಅಭಿಮಾನಿಗಳಲ್ಲಿದೆ. ಆದರೆ, ಉಪೇಂದ್ರ ಮಾತ್ರ ಕೊನೆಯ ಉಸಿರಿರುವವರೆಗೂ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿ ಕೆಲಸ ಮಾಡುತ್ತಲೇ ಇರುತ್ತೇನೆ, ಸಿನಿಮಾ ಮತ್ತು ಪ್ರಜಾಕೀಯ ಎರಡೂ ಜತೆಜತೆಯಾಗಿಯೇ ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಈ ಮನದ ಮಾತುಗಳಿಗೆ ಶನಿವಾರ ವೇದಿಕೆಯಾಗಿದ್ದು ‘ವಿಜಯವಾಣಿ- ದಿಗ್ವಿಜಯ ನ್ಯೂಸ್’ ಆಯೋಜಿಸಿದ್ದ ಕ್ಲಬ್​ಹೌಸ್ ಮಾತುಕತೆ.

    ಯಾರಿಗೂ ಈ ಅನುಮಾನ ಬೇಡ. ಸಿನಿಮಾ ಮಾಡಿಕೊಂಡೇ ನಾನು ಪ್ರಜಾಕೀಯದಲ್ಲೂ ಮುಂದುವರೆ ಯುತ್ತೇನೆ. ನನ್ನ ವೃತ್ತಿ ಸಿನಿಮಾ. ಅದನ್ನು ಬಿಟ್ಟು ಪ್ರಜಾಕೀಯ ದಲ್ಲೇನೋ ಸಾಧನೆ ಮಾಡಬೇಕು, ವ್ಯವಹಾರ ಮಾಡಬೇಕು ಅಥವಾ ಹೆಸರು ಮಾಡಬೇಕು ಎಂಬ ಯಾವುದೇ ಉದ್ದೇಶ ಇಲ್ಲ. ನಾನು ಪ್ರಜಾಕೀಯ ಮಾಡುವುದರಿಂದ ಚಿತ್ರರಂಗಕ್ಕೆ ನಷ್ಟವಾಗುತ್ತಿದೆ ಎಂದೇನಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಅವರೆಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನನ್ನ ಕೆಲಸವನ್ನು ನಾನು ಮಾಡುತ್ತೇನೆ…

    ಇವು ಕನ್ನಡ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ಉಪೇಂದ್ರ ಅವರ ಮನದಾಳದ ಮಾತುಗಳು. ‘ಕ್ಲಬ್​ಹೌಸ್’ನಲ್ಲಿ ‘ವಿಜಯವಾಣಿ- ದಿಗ್ವಿಜಯ ನ್ಯೂಸ್’ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಸಾವಿರಾರು ಅಭಿಮಾನಿಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘‘ನಾನು ಈ ಹಂತಕ್ಕೆ ಬರುವುದಕ್ಕೆ ಜನರ ಪ್ರೀತಿಯೇ ಕಾರಣ’’ ಎಂದು ಮನಸಾರೆ ಸ್ಮರಿಸಿದರು.

    ನಾನು ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದೇನೆ ಅನ್ನೋದಕ್ಕಿಂತ ಇಷ್ಟಪಟ್ಟಿದ್ದೇನೆ ಎನ್ನುವುದು ಹೆಚ್ಚು ಸರಿ. ಏಕೆಂದರೆ, ಇಷ್ಟಪಟ್ಟಾಗ ಯಾವುದೇ ಕಷ್ಟಗಳಿರುವುದಿಲ್ಲ. ನಾನು ಚಾಮರಾಜಪೇಟೆ ಎರಡನೇ ಮುಖ್ಯ ರಸ್ತೆಯ ಒಬ್ಬ ಮಾಮೂಲಿ ಹುಡುಗ. ಮಕ್ಕಳ ಕೂಟದಲ್ಲಿ ನಡೆದ ನಾಟಕದಲ್ಲಿ ಭಾಗವಹಿಸಿದ್ದೆ. ಜನರ ಚಪ್ಪಾಳೆಯ ಸ್ಪೂರ್ತಿಯಿಂದ ನಾವೇ ಒಂದು ತಂಡ ಕಟ್ಟಿದೆವು. ಕಾಲೇಜು ಮುಗಿಸಿ ಚಿತ್ರಗಳಿಗೆ ಮೊದಲು ಹಾಡು, ಸಂಭಾಷಣೆ ಬರೆದೆ, ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿದೆ. ಸಹಾಯಕ ನಿರ್ದೇಶಕನಾದೆ. ಕೊನೆಗೆ ನಿರ್ದೇಶಕ, ನಟ ಆದೆ. ಅಭಿಮಾನಿಗಳು ಮತ್ತು ಚಿತ್ರರಸಿಕರ ಪ್ರೀತಿಯಿಂದ ಬೆಳೆದೆ. ಇಲ್ಲಿ ನನ್ನ ಪ್ರತಿಭೆ ಸಾಸಿವೆಯಷ್ಟು. ಜನ ತೋರಿಸಿದ ಪ್ರೀತಿ ಮರೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಜನರಿಗೆ ವಾಪಸ್ಸು ಕೊಡಬೇಕು ಎಂಬ ಕಾರಣಕ್ಕೆ ಪ್ರಜಾಕೀಯ ಶುರು ಮಾಡಿದ್ದೇನೆ. ಜನರೇ ಈ ಪಕ್ಷದ ಹೈಕಮಾಂಡ್ ಎಂದರು ಉಪೇಂದ್ರ.

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರತಮ್ಮ ಗುರು ಕಾಶೀನಾಥ್ ಅವರನ್ನು ನೆನೆಯಲು ಉಪೇಂದ್ರ ಮರೆಯಲಿಲ್ಲ. ‘ಕಾಶಿ ಸಾರ್ ಗುರುಕುಲ ಇದ್ದಂತೆ. ಯಾರೇ ಅವರ ಹತ್ತಿರ ಕಲಿಯುವುದಕ್ಕೆ ಹೋದರೂ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತಿದ್ದರು. ಹೊಸಬರಾದರೂ, ಪ್ರತಿಭೆ ಇದ್ದರೆ ತಿದ್ದುತ್ತಿದ್ದರು. ಹುಡುಗರು ಕೊಟ್ಟ ಸಲಹೆ ಚೆನ್ನಾಗಿದ್ದರೆ ತೆಗೆದುಕೊಳ್ಳುತ್ತಿದ್ದರು. ಅವರಲ್ಲಿದ್ದ ತಾಳ್ಮೆ ನಾನು ಯಾರಲ್ಲೂ ನೋಡಿಲ್ಲ’ ಎಂದು ಸ್ಮರಿಸಿದರು.

    ಇನ್ನು, ಉಪೇಂದ್ರ ಅವರ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಕೇಳುಗರೊಬ್ಬರು ಪ್ರಶ್ನಿಸಿದಾಗ, ‘ಕರೊನಾದಿಂದ ಚಿತ್ರರಂಗದಲ್ಲಿ ಸಾಕಷ್ಟು ಗೊಂದಲವಿದೆ. ಈಗಾಗಲೇ ಹಲವು ಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿವೆ. ಶೇ. 100ರಷ್ಟು ಹಾಜರಾತಿಗೆ ಸರ್ಕಾರ ಅನುಮತಿ ಕೊಟ್ಟ ನಂತರ ಬಿಡುಗಡೆ ಮಾಡುವ ತೀರ್ವನಕ್ಕೆ ಬಂದಿದ್ದಾರೆ. ಇಂತಹ ಸಮಯದಲ್ಲಿ ಪ್ಲಾನ್ ಮಾಡುವುದು ಕಷ್ಟ. ಏಕೆಂದರೆ, ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂಬುದು ಗೊತ್ತಿಲ್ಲ. ಆಗ ಜನರ ಅಭಿರುಚಿ ಹೇಗಿರುತ್ತದೆ ಎಂಬುದೂ ಗೊತ್ತಿಲ್ಲ. ಒಂದಿಷ್ಟು ಸ್ಕ್ರಿಪ್ಟ್ ಗಳನ್ನು ಮಾಡಿಕೊಂಡಿದ್ದೇನೆ. ಎಲ್ಲವೂ ಒಂದು ಹಂತಕ್ಕೆ ಬಂದ ಮೇಲೆ ನೋಡಿಕೊಂಡು ಮುಂದುವರೆಯುವ ಯೋಚನೆ ಇದೆ’ ಎಂಬುದು ಉಪೇಂದ್ರ ಅವರ ಸ್ಪಷ್ಟ ಮಾತಾಗಿತ್ತು.

    ಸಾವಯವ ಕೃಷಿಗೆ ಆದ್ಯತೆ ನೀಡಿ…

    ನನ್ನ ಜಮೀನಿನಲ್ಲಿ 8-10 ವರ್ಷಗಳಿಂದ ರಾಸಾಯನಿಕ ಬಳಸದೆ ಸಾವಯವ ಗೊಬ್ಬರ ಹಾಕಿ ಬೆಳೆ ಬೆಳೆಯಲಾಗುತ್ತಿದೆ. ಆ ಮೂಲಕ ಶೇ. 99ರಷ್ಟು ಆರೋಗ್ಯಕರ ಆಹಾರ ಉತ್ಪಾದನೆ ಸಾಧ್ಯ. ಈ ವಿಧಾನದಿಂದ ಕೇವಲ ಜನರ ಜೀವನ ಮಾತ್ರವಲ್ಲ ಹುಳಹುಪ್ಪಟೆ, ಚಿಟ್ಟೆಯಂತಹ ಸಣ್ಣ ಜೀವಿಗಳೂ ಬದುಕುಳಿಯುತ್ತಿವೆ. ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆ ಸೇರಿದಂತೆ ಜೀವಿಗಳನ್ನು ಸಾಯಿಸುವ ಬದಲು, ಆರೋಗ್ಯಕರ ಸಾವಯವ ಆಹಾರದೊಂದಿಗೆ ನಾವೂ ಬದುಕಿ ಅನ್ಯ ಜೀವಿಗಳನ್ನೂ ಬದುಕಿಸುವ ಕಾರ್ಯ ಆಗಬೇಕು. ಮೊದಲು ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಹೆಚ್ಚು ಬೇಡಿಕೆ ಇದೆ ಎಂಬ ಮಾಹಿತಿ ಕಾಲಕಾಲಕ್ಕೆ ರೈತರಿಗೆ ದೊರೆಯಬೇಕು. ಆಗ ರೈತರು ರಸ್ತೆಗೆ ಬೆಳೆ ಸುರಿದು ಪ್ರತಿಭಟಿಸುವುದು ತಪು್ಪತ್ತದೆ. ಜತೆಗೆ ಬೆಳೆ ಶೇಖರಿಸಲು ಹಾಗೂ ಮಾರಲು ಸ್ಥಳೀಯವಾಗಿ ಶೀತಲೀಕರಣ ಗೃಹ ವ್ಯವಸ್ಥೆ ಹಾಗೂ ಸೂಕ್ತ ಬೆಲೆಗಾಗಿ ಮಾರುಕಟ್ಟೆ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಉಪೇಂದ್ರ.

    ಉಪೇಂದ್ರನ ಪಕ್ಷ ಅಂತಾದರೆ ಅರ್ಥವಿಲ್ಲ!

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರತಮ್ಮ ಪ್ರಜಾಕೀಯದ ಕುರಿತು ವಿಸ್ತೃತವಾಗಿ ಮಾತನಾಡಿದ ಉಪೇಂದ್ರ, ‘‘ರಾಜಕೀಯ ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಚಿಕ್ಕಂದಿನಿಂದ ಇದ್ದ ಬಯಕೆಗೆ ರೆಕ್ಕೆಪುಕ್ಕ ನೀಡುವ ಸಲುವಾಗಿ ಸಿನಿಮಾ ಕ್ಷೇತ್ರದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, ಇದೊಂದು ಪ್ರಾಮಾಣಿಕ ಪ್ರಯತ್ನ’’ ಎಂದರು. ಪ್ರಜಾಕೀಯದ ಪರಿಕಲ್ಪನೆಯನ್ನು ಹೇಳಿದ ಕೂಡಲೆ ಮೊದಲು ಅದೊಂದು ಭ್ರಮಾಲೋಕದಂತೆ ಭಾಸವಾಗುತ್ತಿತ್ತು. ಆದರೆ ಇದೀಗ ಸ್ವಲ್ಪ ಮಟ್ಟಿಗಿನ ಬೆಳಕು ಕಾಣಿಸುತ್ತಿದೆ. ತಂತ್ರಜ್ಞಾನದ ವೇದಿಕೆಯನ್ನು ಬಳಕೆ ಮಾಡಿಕೊಂಡು ಹಣದ ಅವಶ್ಯಕತೆ ಇಲ್ಲದೆ ಜನರನ್ನು ತಲುಪಬಹುದು ಎಂಬ ಸುನಿಶ್ಚಿತ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬುದೂ ಸೇರಿ ಅನೇಕ ವಿಚಾರಗಳಲ್ಲಿ ಮನದಾಳ ಬಿಚ್ಚಿಟ್ಟರು.

    ಅಗಾಧ ಸಂಖ್ಯೆಯಲ್ಲಿರುವ ಯುವಪೀಳಿಗೆಯನ್ನು ಸೆಳೆಯಲು ನಿಮ್ಮಿಂದ ಏಕೆ ಆಗುತ್ತಿಲ್ಲ?

    – ಸೆಳೆಯುವುದು ಎಂದರೆ ಏನು ಎಂಬುದು ನನಗೆ ಅರ್ಥವಾಗಲಿಲ್ಲ. ಪ್ರತಿಭಟನೆ, ಸಮಾವೇಶ ಮಾಡುವುದು ಎಂದೇ? ಚುನಾವಣೆ ಎಂಬ ಅದ್ಭುತ ಸಿಸ್ಟಂ ನಮಗೆ ಸಿಕ್ಕಿರುವಾಗ ಬೇರೆ ಕಡೆ ಏಕೆ ನೋಡಬೇಕು ಎನ್ನುವುದು ನನ್ನ ಆಲೋಚನೆ. ಜಾತಿ, ಧರ್ಮ, ಪ್ರಚಾರ ನೋಡಿ ಮತ ಹಾಕಬೇಡಿ. ವಿಚಾರಗಳನ್ನು ನೋಡಿ ಮತ ಚಲಾಯಿಸಬೇಕು. ಯುವಕರು ಬೆಳೆಯಬೇಕು ಎಂದರೆ ಏನು? ಯಾರೋ ಯುವಕರನ್ನು ಕರೆತಂದು ಅವರನ್ನು ನಾಯಕರನ್ನಾಗಿಸುವುದು ಪ್ರಜಾಕೀಯದ ಉದ್ದೇಶವಲ್ಲ. ಆತ ಮತ್ತೊಬ್ಬ ಕೇಂದ್ರವಾಗಿ ರೂಪುಗೊಂಡು, ಮತ್ತೆ ಗುಂಪಿಗೆ ಕಾರಣವಾಗುತ್ತದೆ. ಒಬ್ಬನೇ ವ್ಯಕ್ತಿ ಏಕೆ ಐದು ವರ್ಷ ರಾಜನಾಗಿರಬೇಕು? ಆತ ತಪು್ಪ ಮಾಡಿದಾಗ ತಕ್ಷಣವೇ ಕೆಳಗಿಳಿಸುವ ಅಧಿಕಾರ ಜನರಿಗೆ ದೊರೆಯಬೇಕು.

    ಜನಪ್ರತಿನಿಧಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ?

    – ಮುಖ್ಯವಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಜನರ ಮನಸ್ಥಿತಿ ಬದಲಾಗಬೇಕು. ಜನಪ್ರತಿನಿಧಿಯಾಗಲು ಅರ್ಹತೆ ನಿಗದಿಪಡಿಸಲು, ಸಂವಿಧಾನ ರೂಪಿಸಿದ ಮೇಧಾವಿಗಳೇ ಮುಂದಾಗಲಿಲ್ಲ. ಇಲ್ಲಿ ಮತದಾರರೇ ಹೈಕಮಾಂಡ್ ಆಗಬೇಕು. ಎಲ್ಲ ಕಾರ್ಯಗಳಿಗೂ ಪ್ರಮಾಣಿತ ಕಾರ್ಯವಿಧಾನ (ಎಸ್​ಒಪಿ) ಎಂಬುದು ಇರುತ್ತದೆ. ಹಾಗೆಯೇ ಪ್ರಜಾಕೀಯದವರಿಗೂ ಎಸ್​ಒಪಿ ಇರುತ್ತದೆ. ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿ, ಜನರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಆತ ಸರಿಯಾಗಿ ಕೆಲಸ ಮಾಡದಿದ್ದರೆ ಆರು ತಿಂಗಳಿಗೆ ಒಮ್ಮೆ ಮತ ಚಲಾಯಿಸಿ ತಪು್ಪ ತೋರಿಸುತ್ತಾರೆ ಜನರು. ಆಗ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡಲಾಗುತ್ತದೆ. ನಂತರ ಆರು ತಿಂಗಳಲ್ಲೂ ಹೀಗೆಯೇ ಮಾಡಿದರೆ ಪದಚ್ಯುತಿಗೊಳಿಸಲು ಅವಕಾಶವಿರುತ್ತದೆ. ಈ ವ್ಯವಸ್ಥೆಯಲ್ಲಿ ಕೆಲವು ಚುನಾವಣೆಗಳು ಹೆಚ್ಚಾಗಬಹುದು, ಆದರೆ ಅತ್ಯುತ್ತಮವಾದ ವ್ಯವಸ್ಥೆಯೊಂದು ರೂಪುಗೊಳ್ಳುತ್ತದೆ. ಯಾರೋ ಒಬ್ಬಿಬ್ಬರು ನಾಯಕರಾಗಬಾರದು. ಎಲ್ಲರೂ ನಾಯಕರಾಗಬೇಕು.

    ಮುಂದೆ ಯಾವ ಸಿನಿಮಾ ಬಿಡುಗಡೆ ಮಾಡುತ್ತಿದ್ದೀರ?

    – ಇಲ್ಲಿವರೆಗೆ ತೆರೆಯ ಮೇಲೆ ಸಿನಿಮಾ ಮಾಡಿದ್ದೇನೆ. ಈಗ ರಿಯಲ್ ಸಿನಿಮಾ ನಿರ್ವಣದಲ್ಲಿದ್ದೇನೆ. ಇದಕ್ಕೆ 2.25 ಲಕ್ಷ ಕೋಟಿ ರೂಪಾಯಿ ಬಜೆಟ್. ಪ್ರಜಾಕೀಯವೇ ಆ ಸಿನಿಮಾ. ಅದು ಜನರ ಬಜೆಟ್ ಹಣ. ಈ ಸಿನಿಮಾ ಸಕ್ಸೆಸ್ ಆದರೆ ನಾವೆಲ್ಲರೂ ಅದ್ಭುತ ಸಿನಿಮಾವೊಂದರಲ್ಲಿ ಬದುಕಬಹುದು.

    ತಂತ್ರಜ್ಞಾನದ ಮೂಲಕ ನಗರಗಳಲ್ಲಿ, ಶಿಕ್ಷಿತರಲ್ಲಿ ಮಾತ್ರವೇ ವಿಚಾರ ತಲುಪಿಸಬಹುದು. ಗ್ರಾಮೀಣ ಪ್ರದೇಶ ತಲುಪುವ ಬಗೆ ಹೇಗೆ?

    – ಶಿಕ್ಷಿತರು ಚಿಂತನೆ ಮಾಡುತ್ತಾರೆ, ಅವರಲ್ಲಿ ತಂತ್ರಜ್ಞಾನ ಇದೆ, ಸರಿ. ಆದರೆ ಇದೀಗ ಗ್ರಾಮೀಣ ಪ್ರದೇಶದಲ್ಲೂ ತಂತ್ರಜ್ಞಾನ ತಲುಪಿದೆ. ಯಾವುದೇ ಹಣವನ್ನು ವ್ಯಯಿಸದೆ ಗ್ರಾಮ ಪಂಚಾಯಿತಿಯಲ್ಲಿ ಜಯ ಸಿಕ್ಕಿದ್ದನ್ನು ಕಂಡಿದ್ದೇವೆ. ಅಲ್ಲಿನ ಗ್ರಾಮೀಣ ಜನರ ಕೈಯಲ್ಲಿ ಸ್ಮಾರ್ಟ್​ಫೋನ್​ಗಳಿವೆ. ಹಾಗಾಗಿ ಗ್ರಾಮೀಣ ಪ್ರದೇಶಗಳಿಗೂ ತಲುಪುವುದು ಸಾಧ್ಯವಿದೆ.

    ತಕ್ಷಣ ಸಿಕ್ಕರೆ ರಾಜಕೀಯ ಬದಲಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ ಬಹುತೇಕರು ಪದವಿಗಿಂತ ಹೆಚ್ಚಿನ ಶಿಕ್ಷಣ ಪಡೆದರೂ ಭ್ರಷ್ಟಾಚಾರ ಇದೆಯಲ್ಲ?

    – ರಾಜಕೀಯವನ್ನು ಉದ್ಯಮ ಮಾಡಿರುವುದೇ ತಪ್ಪಿನ ಮೂಲ. ಹೆಚ್ಚು ಹಣ ವ್ಯಯಿಸಿ ಬೃಹತ್ ಪ್ರಚಾರ ಮಾಡಿದವನನ್ನು ಜನರು ಆಯ್ಕೆ ಮಾಡುತ್ತಾರೆ. ಯಾವುದೇ ಹಣ ಖರ್ಚು ಮಾಡದೆ ಇರುವ ಪ್ರಾಮಾಣಿಕರನ್ನು ಗೆಲ್ಲಿಸುವುದೇ ಇಲ್ಲ. ಹಣವನ್ನು ಹೂಡಿಕೆ ಮಾಡಿದವನು ಚುನಾವಣೆ ಗೆಲುವಿನ ನಂತರ ಮತ್ತೆ ಅದನ್ನು ದುಡಿಯಲು ಅಡ್ಡದಾರಿ ಹಿಡಿಯುತ್ತಾನೆ. ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಅನೇಕರೊಂದಿಗೆ ಮಾತನಾಡಿದಾಗ, ಅಲ್ಲಿನ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗಬೇಕು ಅಂತ ತಿಳಿಸಿದರು. ಆ ದಾರಿ ಬೇಡ, ಎಂಬ ಕಾರಣಕ್ಕೆ ಪ್ರಜಾಕೀಯ ಕಾರ್ಯನಿರ್ವಹಿಸುತ್ತಿದೆ.

    ಕೈಗೆಟುಕದ ಆಲೋಚನೆ ಎಂದು ತೋರುತ್ತದಲ್ಲ?

    – ಈಗಿನ ರಾಜಕೀಯ ವ್ಯವಸ್ಥೆಗೆ ಬಹಳಷ್ಟು ವ್ಯತ್ಯಾಸವಿರುವುದರಿಂದ ಹೀಗೆ ಅನಿಸುತ್ತದೆ. ಎಲ್ಲರೂ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಪರಿಹಾರದ ಕುರಿತು ಮಾತನಾಡುವುದಿಲ್ಲ. ಏಕೆಂದರೆ, ಪರಿಹಾರ ಎಂದ ಕೂಡಲೆ, ಆ ಸಮಸ್ಯೆಯನ್ನು ಬಗೆಹರಿಸಲು ನೀನೇನು ಮಾಡುತ್ತಿದ್ದೀಯ ಎಂಬ ಪ್ರಶ್ನೆ ಬರುತ್ತದೆ. ಹಾಗಾಗಿ ಯಾರೂ ಪರಿಹಾರದ ಕುರಿತು ಮಾತನಾಡುವುದಿಲ್ಲ. ‘ಪಾಲಿಟಿಕ್ಸ್ ಈಸ್ ದ ಲಾಸ್ಟ್ ರೆಸಾರ್ಟ್ ಆಫ್ ಸ್ಕೌಂಡ್ರಲ್’ ಎಂಬ ಪರಿಭಾಷೆಯನ್ನು ಬದಲಾಯಿಸುವುದೇ ಪ್ರಜಾಕೀಯದ ಉದ್ದೇಶ.

    ರಾಜಕಾರಣಿಗಳಿಗೆ ಕಿವಿಮಾತು

    ಜನರಿಗೆ ಪ್ರಮುಖವಾಗಿ ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣ ದೊರೆಯುವಂತಾಗಬೇಕು. ಅದನ್ನು ಒದಗಿಸುವ ವ್ಯವಸ್ಥೆಯಾದರೆ ಜನರ ಅರ್ಧ ಹೊರೆ ಕಡಿಮೆ ಮಾಡಿದಂತೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದು ಉಪೇಂದ್ರ ಅವರ ಸಲಹೆ.

    ಹಾಡು ಹಾಡಿದ ಸಂಗೀತ ನಿರ್ದೇಶಕ…

    ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಉಪೇಂದ್ರ ಜತೆಗಿನ ಸಂವಾದದಲ್ಲಿ ರಾಜಕೀಯ, ಸಿನಿಮಾ, ಕೃಷಿ, ಸಾಮಾಜಿಕ ಚಟುವಟಿಕೆ ಮುಂತಾದ ವಿಷಯಗಳು ಚರ್ಚೆಯಾದವು. ನಟಿ ಪೂಜಾ ಲೋಕೇಶ್, ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಮುಂತಾದವರು ಭಾಗವ ಹಿಸಿದ್ದರು. ಉಪೇಂದ್ರ ಅವರ ‘ಐ ಲವ್ ಯೂ’ ಚಿತ್ರಕ್ಕಾಗಿ ತಾವು ಸಂಯೋಜಿಸಿದ್ದ ಹಾಡನ್ನು ಕಿರಣ್ ತೋಟಂಬೈಲ್ ಹಾಡಿದರು.

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

    ಎಚ್ಚರಿಕೆ ವಹಿಸದಿದ್ದರೆ ಮೂರನೇ ಅಲೆ ನಿಶ್ಚಿತ: ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಆತಂಕ

    ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

    ಅಂಗೈಯಲ್ಲೇ ಅರಳಿಕಟ್ಟೆ!; ಕ್ಲಬ್​ಹೌಸ್-ಸ್ಪೇಸ್​ನಲ್ಲಿ ಮಾತು ಮಾತು ಮಾತು..

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts