More

    ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಕೃಷಿ, ಮುಂದಿನ ರಾಜಕೀಯ ನಡೆ ಮತ್ತು ಚುನಾವಣೆ ರಣತಂತ್ರದ ಕುರಿತು ತಮ್ಮದೇ ಆದ ಪರಿಕಲ್ಪನೆ ಹೊಂದಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಸ್ಪಷ್ಟವಾದ ಯೋಜನೆಯೊಂದಿಗೆ ಜನರ ಮುಂದೆ ಹೋಗಲು ತಯಾರಾಗಿದ್ದಾರೆ. ಪೂರ್ವಾಭ್ಯಾಸ, ಪೂರ್ವಾನು ಭವ, ಕ್ಷೇತ್ರಕಾರ್ಯ ದೊಂದಿಗೆ ಕುಮಾರಸ್ವಾಮಿ ನಾಯಕತ್ವ ಯಾಕೆ ಬೇಕು? ಜೆಡಿಎಸ್​ನ ಅವಶ್ಯಕತೆ ಏನಿದೆ? ಭವಿಷ್ಯದ ಕರ್ನಾಟಕ ಹೇಗಿರ ಬೇಕು ಎಂಬ ಚಿಂತನೆ, ಸಮಗ್ರ ಯೋಜನೆಯೊಂದಿಗೆ ಜನರೊಂದಿಗೆ ಬೆರೆಯಲು ಎಚ್​ಡಿಕೆ ಸಜ್ಜಾಗಿದ್ದಾರೆ.

    ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಅವರು ಸೋಮವಾರ ಮುಕ್ತವಾಗಿ ಮನದಿಂಗಿತ ಹಂಚಿಕೊಂಡರು. ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರಕ್ಕೆ ಮಾತ್ರ ಒತ್ತು ನೀಡದೆ, ದೇಶದ ಭವಿಷ್ಯ, ನಮ್ಮ ಕೃಷಿ, ಯುವ ಜನರ ಆಸಕ್ತಿ, ಅದಕ್ಕೆ ಪೂರಕವಾಗಿ ರಾಜಕೀಯ ಪಕ್ಷಗಳ ನಡೆ ನುಡಿ ಇರಬೇಕೆಂಬ ಕಳಕಳಿಯನ್ನು ತೆರೆದಿಟ್ಟರು. ‘2023ರ ವಿಧಾನಸಭೆ ಚುನಾವಣೆಯೇ ನನ್ನ ರಾಜಕೀಯ ಜೀವನದ ಕೊನೆಯ ಹೋರಾಟ. ಜೆಡಿಎಸ್​ಗೆ ಸ್ವತಂತ್ರ ಅಧಿಕಾರ ಕೊಡಿ, ಸುಭದ್ರ ನಾಡು ಕಟ್ಟುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

    ಚುನಾವಣೆಗೆ ಐದು ಪ್ರಮುಖ ಕಾರ್ಯಸೂಚಿಯನ್ನು ಮುಂಚಿತವಾಗಿ ಜನರ ಮುಂದಿಡುವ ಜತೆಗೆ, ಪಕ್ಷಕ್ಕೆ ಏಕೆ ಬಹುಮತದ ಅಧಿಕಾರ ಕೊಡಬೇಕೆಂದು ಮನವರಿಕೆ ಮಾಡಿಕೊಡಲು ಉತ್ಸುಕ ಎಂಬುದನ್ನು ವ್ಯಕ್ತಪಡಿಸಿದರು. ಕೇತಗಾನಹಳ್ಳಿಯ ತಮ್ಮ ಜಮೀನನ್ನೇ ಕೃಷಿ ಸಂಶೋಧನಾ ಕೇಂದ್ರವಾಗಿ, ಯುವಕರನ್ನು ಆಕರ್ಷಿಸುವ ತಾಣವಾಗಿ ಪರಿವರ್ತಿಸಲು ಹೊಸ ಹೊಸ ಪ್ರಯೋಗ ನಡೆಸಿರುವ ಅವರು, ಅಲ್ಲಿ ಏನೆಲ್ಲ ಕೆಲಸಗಳಾಗಿವೆ, ಮುಂದೇನು ಮಾಡಬೇಕೆಂದಿರುವೆ ಎಂಬುದನ್ನೂ ಹಂಚಿಕೊಂಡರು.

    ಬೊಮ್ಮಾಯಿಗೆ ಸಹಕಾರ ಏಕೆ?: ಹಿಂದೆ ಎಸ್.ಆರ್. ಬೊಮ್ಮಾಯಿ ಸರ್ಕಾರ ಪತನಕ್ಕೆ ದೇವೆಗೌಡರು ಕಾರಣರಲ್ಲ. ರಾಮಕೃಷ್ಣ ಹೆಗಡೆ ಮತ್ತು ಜೀವರಾಜ ಆಳ್ವ ಏನೆಲ್ಲ ಮಾಡಿದರು ಎಂದು ತಿಳಿದುಕೊಳ್ಳಲು ಅವರು ಬದುಕಿಲ್ಲ. ಆದರೆ, ಅವರೊಂದಿಗೆ ಒಡನಾಟದಲ್ಲಿದ್ದ ನಾಯಕರಿಗೆ ಗೊತ್ತಿದೆ. ಈಗ ಬಸವರಾಜ ಬೊಮ್ಮಾಯಿಗೆ ಸಹಕಾರ ನೀಡುವ ಮಾತಿನಲ್ಲಿ ಲಿಂಗಾಯತರ ಓಲೈಕೆ ಅಥವಾ ತಪು್ಪ ಗ್ರಹಿಕೆ ನಿವಾರಿಸುವ ಉದ್ದೇಶವಿಲ್ಲ. ಅಕಾಲಿಕ ಚುನಾವಣೆಯಿಂದ ಜನರ ಮೇಲೆ ಮತ್ತೊಂದು ಆರ್ಥಿಕ ಹೊರೆ ಬೀಳಬಾರದು ಎಂಬ ಕಾಳಜಿ ಇದೆ. ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್ ಜತೆಗೆ ಕೈ ಜೋಡಿಸಿದಾಗಲೂ ಜೆಡಿಎಸ್​ನ ಉದ್ದೇಶ ಇದೇ ಆಗಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

    ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

    ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

    2023ರ ಚುನಾವಣೆಗೆ ಐದಂಶದ ಕಾರ್ಯಸೂಚಿ

    ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ 14 ತಿಂಗಳ ಆಡಳಿತಾವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದರೂ ಅವರ ಬಾಳು ಹಸನಾಗಿಸಿದ ತೃಪ್ತಿ ಇಲ್ಲ. ಹೀಗಾಗಿ ಸ್ವತಂತ್ರ ಸರ್ಕಾರ ರಚಿಸಲು ನನಗೆ ನಾಡಿನ ಜನತೆ ಅವಕಾಶ ಕೊಟ್ಟರೆ ಏನೆಲ್ಲ ಮಾಡಬಹುದು ಎಂದು ನನ್ನದೇ ಪರಿಕಲ್ಪನೆಯ ಯೋಜನೆಗಳನ್ನು ಜನರ ಮುಂದಿಡುವೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ವಿಜಯವಾಣಿ ಕ್ಲಬ್​ಹೌಸ್ ವೇದಿಕೆಯಲ್ಲಿ ಮಾತನಾಡಿ, ಮುಂದಿನ ಚುನಾವಣೆಯನ್ನು ಪ್ರಾದೇಶಿಕ ಅಸ್ಮಿತೆ ಹಾಗೂ ಕುಮಾರಸ್ವಾಮಿ ನಾಯಕತ್ವದಲ್ಲಿ ಎದುರಿಸಲಿದ್ದು, ಜಾತಿ ಬೇಕೋ, ಬದುಕು ಬೇಕೋ ಎಂಬ ಘೋಷ ವಾಕ್ಯದಡಿ ಪ್ರಚಾರಕ್ಕಿಳಿಯಲಿದ್ದೇವೆ. 2023ರ ವಿಧಾನಸಭೆ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಹೋರಾಟವಾಗಲಿದ್ದು, ಪ್ರಮುಖ ಐದು ವಿಷಯಗಳನ್ನು ಜನರ ಮುಂದಿಟ್ಟು ಅವರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತೇನೆೆ. ಪ್ರತಿಯೊಂದು ವಿಷಯಕ್ಕೂ ನೀಲಿನಕ್ಷೆ ಸಿದ್ಧವಾಗಿದ್ದು, ‘ಸುಖಿ ಕುಟುಂಬ-ಸಮೃದ್ಧ ಕರ್ನಾಟಕ’ ಇದು ನನ್ನ ಆಶಯವಾಗಿದೆ ಎಂದರು.

    ವರ್ಷಕ್ಕೊಂದು ವಿಷಯ ಅನುಷ್ಠಾನಕ್ಕಾಗಿ ತಲಾ 25 ಸಾವಿರ ಕೋಟಿ ರೂ. ಕಾದಿಡಲಿದ್ದು, ಸಂಪದ್ಭರಿತ ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ. ಹೊಂದಿಸುವುದು ದೊಡ್ಡ ಸವಾಲೇನಲ್ಲ. ಈಗೇನು ಬಿಜೆಪಿ, ಕಾಂಗ್ರೆಸ್ ನಡುವೆ ನಡೆಯುತ್ತಿದೆಯಲ್ಲ 10 ಪರ್ಸೆಂಟ್ ವ್ಯವಹಾರಕ್ಕೆ ಕಡಿವಾಣ ಹಾಕಿದರೆ ಸಾಕು. ಪ್ರತಿ ವರ್ಷ 25 ಸಾವಿರ ಕೋಟಿ ರೂ. ಅನಾಯಾಸವಾಗಿ ಕ್ರೋಡೀಕರಣವಾಗುತ್ತದೆ ಎಂದು ಹೇಳಿದರು.

    ನಾನು ಹೇಗೆ ಬಂದೆ?

    ನಾನು ರ್ಯಾಂಕ್ ವಿದ್ಯಾರ್ಥಿಯಲ್ಲ. ಕಾಲೇಜು ದಿನಗಳಲ್ಲಿ ಸಿನಿಮಾ ಹುಚ್ಚು ಬಹಳ ಇತ್ತು. ರಾಜ್​ಕುಮಾರ್ ಸಿನಿಮಾಗಳನ್ನು 8-10 ಬಾರಿ ನೋಡುತ್ತಿದ್ದೆ. ಕಾಲೇಜು ವ್ಯಾಸಂಗದ ಬಳಿಕ ಕಸ ವಿಲೇವಾರಿ ಗುತ್ತಿಗೆ ಹಿಡಿದಿದ್ದೆ, ದೇವೇಗೌಡರ ಪ್ರಭಾವ ಬಳಸಿಕೊಂಡೆ ಎಂಬ ಆರೋಪ ಬಂದ ಹಿನ್ನೆಲೆ ಕೈಬಿಟ್ಟು, ಹೊಳೆನರಸೀಪುರದಲ್ಲಿ ಚೆನ್ನಾಂಬಿಕಾ ಚಿತ್ರಮಂದಿರ ಆರಂಭಿಸಿದೆ. ಈ ಟಾಕೀಸ್ ಉದ್ಘಾಟನೆಗೆ ಹೋದಾಗ ನಮ್ಮ ತಂದೆ ಕೃಷಿ ಮಹತ್ವದ ಕುರಿತು ಬೋಧನೆ ಮಾಡಿದ್ದರು. ನಂತರ ಸಿನಿಮಾ ವಿತರಕನಾದೆ, ಅದರಿಂದ ಬಂದ ಆದಾಯವನ್ನು ದೇವೇಗೌಡ ಹೋರಾಟ, ರಾಜಕೀಯ ಚಟುವಟಿಕೆಗಳಿಗೆ ಬಳಸಿದ್ದರಿಂದ ರಾಜಕೀಯ ಒಡನಾಟ ಶುರುವಾಯಿತು.

    20 ದಿನಗಳ ಗಡುವು

    ಈಗಾಗಲೆ ಪಕ್ಷ ತೊರೆದು ಹೋದ ಅನೇಕ ನಾಯಕರು ದೇವೇಗೌಡರನ್ನು ದುರಂತ ನಾಯಕನೆಂದೇ ಬಿಂಬಿಸುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್​ಡಿಕೆ ತಿಳಿಸಿದರು. ಮೈಸೂರು ಜಿಲ್ಲೆಯ ಪಕ್ಷದ ಬೆಳವಣಿಗೆ, ಶಾಸಕರೊಬ್ಬರ ವರ್ತನೆ ಇದಕ್ಕೆ ಹೊರತಾಗಿಲ್ಲ. ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಎಲ್ಲವೂ ಸರಿಹೋಗುತ್ತದೆ ಎಂಬ ಸಲಹೆಯನ್ನೂ ಸ್ವೀಕರಿಸಿರುವೆ. 15-20 ದಿನಗಳ ಗಡುವು ಹಾಕಿಕೊಂಡಿದ್ದೇನೆ. ಅಷ್ಟರೊಳಗೆ ಅವರು ತಮ್ಮ ನಿಲುವೇನೆಂದು ಸ್ಪಷ್ಟಪಡಿಸಬೇಕು. ಕೊನೇ ಘಳಿಗೆಯಲ್ಲಿ ಹೇಳಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಂತೆ ಮಾಡುವ ತಂತ್ರಗಾರಿಕೆಯನ್ನು ಬಲ್ಲೆ. ಹೀಗಾಗಿಯೇ ಗಡುವು ಹಾಕಿಕೊಂಡಿರುವೆ ಎಂದರು.

    ಜೆಡಿಎಸ್ ಶಕ್ತಿ ಕುಂದಿಲ್ಲ, ನೋಡ್ತಾ ಇರಿ!

    ಪಕ್ಷದಿಂದ ಬೆಳೆದವರು ಎಲ್ಲ ಲಾಭ ಮಾಡಿಕೊಂಡರು. ನಂತರ ಬಿಟ್ಟು ಹೋಗಿದ್ದೇ ಪಕ್ಷಕ್ಕೆ ಮುಳುವಾಯಿತು. ದೇವೇಗೌಡರು ಎಲ್ಲರನ್ನೂ ನಂಬಿದರು. ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಪಕ್ಷ ದುರ್ಬಲವಾಯಿತು. ಆದರೆ, ಆ ಶಕ್ತಿ ಕುಂದಿಲ್ಲ ಎಂಬುದು ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯೇ ಸಾಕ್ಷಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಆಷಾಢ ಮಾಸ ಬಳಿಕ ರಾಜ್ಯ ಪ್ರವಾಸ ಮಾಡಲಿದ್ದು, ಕಾರ್ಯಸೂಚಿ ರೂಪಿಸಲಾಗಿದೆ. ನಾಲ್ಕು ತಂಡ ರಚನೆಯಾಗಿದೆ. ಚುನಾವಣೆ ಕಾರಣಕ್ಕೆ ಪ್ರಣಾಳಿಕೆ ಕೊಟ್ಟರೆ ಜನರಿಗೆ ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಮುಂಚಿತವಾಗಿಯೇ ಪ್ರಧಾನ ಕಾರ್ಯಸೂಚಿ ಬಹಿರಂಗಪಡಿಸಲು ನಿರ್ಧರಿಸಲಾಗಿದೆ. 2-3 ತಿಂಗಳಲ್ಲೇ 150 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

    ಯೋಜನೆಗಳಿಗೆ ಇತಿಶ್ರೀ ಹಾಡಿದ್ದು ಬೇಸರವಿದೆ

    ಇಸ್ರೇಲ್ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಇಸ್ರೇಲ್ ಪ್ರವಾಸ ಮಾಡಿ ಅಧ್ಯಯನ ಮಾಡಿ ಮರಳಿದ ಬಳಿಕ ಇಸ್ರೇಲ್ ಕೃಷಿ ಪದ್ಧತಿ ಅಳವಡಿಕೆಗೆ 300 ಕೋಟಿ ರೂ. ಮೀಸಲಿರಿಸಿ ಪ್ರತ್ಯೇಕ ವಿಭಾಗವನ್ನು ಆರಂಭಿಸಿದೆ. ಆದರೆ, ನಂತರ ಬಂದ ಸರ್ಕಾರ ಗಮನ ಹರಿಸಲಿಲ್ಲ. ಕಾದಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದರು. ಇದು ಬಹಳ ನೋವಿನ ವಿಚಾರ. ಹಾಗೆಯೇ ನಾನು ಜಾರಿಗೆ ತಂದಿದ್ದ ಎಲ್ಲ ಯೋಜನೆಗಳನ್ನೂ ಸ್ಥಗಿತಗೊಳಿಸಿ ಬೇರೆ ಉದ್ದೇಶಕ್ಕೆ ಅನುದಾನ ವಿನಿಯೋಗಿಸಿದರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ಅಪ್ಪ ಮಕ್ಕಳ ಪಕ್ಷ ಎಂಬುದು ಜೆಡಿಎಸ್​ಗೆ ಮಾತ್ರ ಅನ್ವಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ದೇವೇಗೌಡರ ಬೆಳವಣಿಗೆ ಸಹಿಸಲಾಗದವರು ಇಂಥದ್ದೊಂದು ಪಿತೂರಿ ಹೂಡಿದ್ದಾರೆ. ಬೇರೆಲ್ಲ ಪಕ್ಷಗಳಲ್ಲಿ ಏನಾಗಿದೆ, ಯಾರ್ಯಾರ ಮಕ್ಕಳು ಎಷ್ಟೆಷ್ಟು ಜನ ಅಧಿಕಾರದಲ್ಲಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಜೆಡಿಎಸ್ ಮಾತ್ರ ಅಪಪ್ರಚಾರಕ್ಕೆ ತುತ್ತಾಗಿದೆ.

    | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಮಾದರಿ ಮುಂದಿಡುವೆ

    ಕೃಷಿಯತ್ತ ಯುವಕರನ್ನು ಸೆಳೆಯಲು, ಆರ್ಥಿಕತೆ ವೃದ್ಧಿಗೆ ಕೃಷಿ ಪ್ರಬಲ ಸಾಧನ ಎಂದು ಸಾಬೀತುಪಡಿಸಲು ಕೇತನಗಾನಹಳ್ಳಿಯ ತಮ್ಮ ಜಮೀನನ್ನು ಪ್ರಯೋಗಶಾಲೆ ಮಾಡಿಕೊಂಡಿದ್ದೇನೆ ಎಂದು ಎಚ್​ಡಿಕೆ ಹೇಳಿದರು. ಕೃಷಿ ಮತ್ತು ಕೃಷಿಗೆ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಾಣಿಕೆಯಿಂದ ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯವಿದೆ ಎಂದು ನನ್ನ ಜಮೀನಿನ ಮೂಲಕವೇ ರೈತರಿಗೆ ಮನವರಿಕೆ ಮಾಡಿಕೊಡಬೇಕೆಂದಿದ್ದೇನೆ. ಮುಂದಿನ ಎರಡು ವರ್ಷದೊಳಗೆ ಈ ಕಲ್ಪನೆ ಪರಿಪೂರ್ಣವಾಗಲಿದೆ. ಕೃಷಿಯಿಂದ ವಿಮುಖವಾಗುತ್ತಿರುವ ಯುವಕರನ್ನು ಸೆಳೆದು ಸೂಕ್ತ ತರಬೇತಿ ನೀಡಿ ಮತ್ತೆ ಕೃಷಿಯಲ್ಲಿ ತೊಡಗಿಸುವುದು ನಮ್ಮ ಉದ್ದೇಶವಾಗಿದ್ದು ಇದಕ್ಕಾಗಿ ಕೇತಗಾನಹಳ್ಳಿ ಜಮೀನಿನಲ್ಲಿ 10 ಸಾವಿರ ಅಡಕೆ ಮರ, 25 ಸಾವಿರ ಬಾಳೆ ಬೆಳೆಸುತ್ತಿದ್ದು ಹನಿ ನೀರಾವರಿ ವ್ಯವಸ್ಥೆ, 300 ಹಸು ಸಾಕಣೆ, ಕುರಿ, ನಾಟಿ ಕೋಳಿ, ಮೂರು ಹೊಂಡಗಳಲ್ಲಿ ಮೀನು ಸಾಕಾಣಿಕೆ ಚಟುವಟಿಕೆ ಮುಖಾಂತರ ರೈತನಿಗೆ ಇದೊಂದು ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸುವ ಉದ್ದೇಶವಿದೆ ಎಂದರು.

    ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದೇನು?

    • ರೈತರ ಸಾಲ ಮನ್ನಾ ಮಾಡುವುದರಿಂದ ಮಾತ್ರ ಅವರು ಸಬಲರಾಗುತ್ತಾರೆ ಎಂದು ನಾನು ಭಾವಿಸಿಲ್ಲ. ಕೃಷಿಗೆ ಬೇಕಾದ ಎಲ್ಲ್ಲ ಹೂಡಿಕೆಯನ್ನು ಸರ್ಕಾರವೇ ನಿರ್ವಹಿಸಿ ರೈತರ ಸಂಪಾದನೆ ಮೂಲಕ ಬೊಕ್ಕಸಕ್ಕೆ ಭರಿಸಿಕೊಳ್ಳುವ ವ್ಯವಸ್ಥೆ ಬರಬೇಕು. ಅಂಥದ್ದೊಂದು ದೊಡ್ಡ ಯೋಜನೆ ಇದೆ. ಸಾಲ ವ್ಯವಸ್ಥೆ ಸರಳೀಕರಣ, ಮಾರುಕಟ್ಟೆಯಲ್ಲಿ ಕ್ರಾಂತಿ, ರೈತರಲ್ಲಿ ಬೆಳೆ ಪ್ಲ್ಯಾನಿಂಗ್ ತರುವುದು ಮೂಲಕ ಸೌಲತ್ತುಗಳ ಅಭಿವೃದ್ಧಿ, ಮಳೆಗೆ ತಕ್ಕ ಬೆಳೆ, ಸಾಮೂಹಿಕ ಕೃಷಿಗೆ ಉತ್ತೇಜನ ಮುಂತಾದ ಅಂಶಗಳು ಈ ಯೋಜನೆಯಲ್ಲಿದ್ದು ಅದಕ್ಕಾಗಿ 25-30 ಸಾವಿರ ಕೋಟಿ ರೂ. ಅಗತ್ಯವಿದೆ.
    • ಕರೊನಾ ಕಷ್ಟ ಕಾಲದಲ್ಲಿ ಶಿಕ್ಷಣ ಕ್ಷೇತ್ರದ ಪರಿಸ್ಥಿತಿ ಏನಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಮಟ್ಟದಲ್ಲಿಯೇ ಯುಕೆಜಿಯಿಂದ 12ನೇ ತರಗತಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ತೆರೆದು ಎಲ್ಲರಿಗೂ ಉಚಿತ ಶಿಕ್ಷಣ ವ್ಯವಸ್ಥೆ ಮಾಡಬೇಕು ಎಂಬುದು ಎರಡನೇ ವರ್ಷದ ಕಾರ್ಯಕ್ರಮವಾಗಿದ್ದು, ಇದಕ್ಕೂ ಕೂಡ 25 ಸಾವಿರ ಕೋಟಿ ರೂ. ಬಳಸಬೇಕೆಂದಿದ್ದೇನೆ.
    • ಆರೋಗ್ಯ ಕ್ಷೇತ್ರದಲ್ಲೂ ಆಮೂಲಾಗ್ರ ಬದಲಾವಣೆ ಅಗತ್ಯವಿದೆ. ಪ್ರತಿ ಪಂಚಾಯಿತಿಗೊಂದು 25-30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ತೆರೆಯುವುದು, ಪೂರಕ ಸೌಲತ್ತುಗಳನ್ನು ಕಲ್ಪಿಸುವುದು ಮೂರನೇ ಆದ್ಯತೆಯಾಗಿದ್ದು, ಇದರ ಬಜೆಟ್ ಗಾತ್ರ ಕೂಡ 25 ಸಾವಿರ ಕೋಟಿ ರೂ. ಆಗಿರಲಿದೆ.
    • ನಾಲ್ಕನೇ ಆದ್ಯತೆಯಾಗಿ ಸಮಗ್ರ ವಸತಿ ಯೋಜನೆ ರೂಪಿಸುವ ಉದ್ದೇಶವಿದೆ. ಪದೇಪದೆ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗುವ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಉದ್ದೇಶವಿದೆ.
    • ಕಾಂಪಿಟ್ ವಿತ್ ಚೈನಾ ಹೆಸರಿನಲ್ಲಿ ನಾನು ಜಾರಿಗೆ ತರಲು ನಿರ್ಧರಿಸಿದ್ದ ಯೋಜನೆಯನ್ನು ಬಿಜೆಪಿ ಸರ್ಕಾರ ಕಾಪಿ ಮಾಡಿ ತನ್ನದು ಎಂದು ಹೇಳಿಕೊಂಡಿತು. ಇದರ ಬಗ್ಗೆ ಏನು ಬೇಸರ ಇಲ್ಲ. ನಾನು ಅಧಿಕಾರಕ್ಕೆ ಬಂದರೆ ಕೈಗಾರಿಕೆಗೂ ಕೂಡ ಅಷ್ಟೇ ಮಹತ್ವ ನೀಡುವೆ. ಪ್ರತಿ ಜಿಲ್ಲೆಗೊಂದು ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ.

    ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts