ಎಚ್ಚರಿಕೆ ವಹಿಸದಿದ್ದರೆ ಮೂರನೇ ಅಲೆ ನಿಶ್ಚಿತ: ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಆತಂಕ

Vijayavani Clubhouse
Published on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕೊನೆಯ ಹಂತದಲ್ಲಿರುವಾಗಲೇ, ಮೂರನೇ ಅಲೆ ಬಾಗಿಲಲ್ಲಿ ಬಂದು ನಿಂತಿದೆ. ಎಚ್ಚರಿಕೆ ವಹಿಸದಿದ್ದರೆ ಒಳಗೆ ಪ್ರವೇಶಿಸುವುದು ನಿಶ್ಚಿತ. ಹಾಗೇನಾದರೂ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಯದೇವ ಹೃದಯ ವಿಜ್ಞಾನ ಸಂಶೋಧನಾ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾತನಾಡಿದ ಅವರು ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳೆದ 3-4 ವಾರಗಳಿಂದ ಕೋವಿಡ್ ಸೋಂಕು ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿವೆ. ಪರಿಣಾಮ ಗಡಿ ಜಿಲ್ಲೆಗಳಲ್ಲಿ 2-3 ವಾರಗಳಿಂದ ಸೋಂಕು ಪ್ರಮಾಣ ದರ ಹೆಚ್ಚಾಗಿದ್ದು, ಇದು ಮೂರನೇ ಅಲೆಯ ಮುನ್ಸೂಚನೆಯಾಗಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಚಿಕಿತ್ಸೆಗೆ ಪೂರಕ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೋಂಕು ತಡೆಯಲು ಜನರು ಸಹಕರಿಸಬೇಕಿದೆ ಎಂದರು.

ಮೊದಲ ಮತ್ತು ಎರಡನೇ ಅಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಸೋಂಕು ಹೆಚ್ಚಾದ 3-4 ವಾರಗಳ ನಂತರ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದವು. 3ನೇ ಅಲೆಯಲ್ಲೂ ಅದೇ ರೀತಿಯ ಲಕ್ಷಣಗಳು ಗೋಚರಿಸುತ್ತಿವೆ. ಕರೊನಾ ವೈರಸ್ ಚಲಿಸುವುದಿಲ್ಲ. ಸೋಂಕಿತರು ಚಲಿಸಿದ ಕಡೆ ವೈರಸ್ ಹರಡುತ್ತದೆ. ಆದ್ದರಿಂದ ಜನರು ಅನಗತ್ಯ ಸಂಚಾರ ಹಾಗೂ ಗುಂಪು ಸೇರುವುದನ್ನು ಕಡಿಮೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸೋಂಕು ಲಕ್ಷಣಗಳು ಕಂಡು ಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಮಾದರಿಯಾಗಬೇಕು: ಕೋವಿಡ್ ನಿಯಂತ್ರಿಸುವ ಕಾರ್ಯದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ತಡೆಯುವಲ್ಲಿ ಜವಾಬ್ದಾರಿಯಿಂದ ವರ್ತಿಸುವ ಮೂಲಕ ಮೇಲ್ಪಂಕ್ತಿಯಲ್ಲಿ ನಿಲ್ಲಬೇಕು. ಆ ಮೂಲಕ ಜನರೂ ಸಹ ಕೋವಿಡ್ ನಿಯಮಗಳನ್ನು ಪಾಲಿಸಲು ಪ್ರೇರೇಪಣೆ ನೀಡಬೇಕು ಎಂದು ಹೇಳಿದರು.

ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ: ಅಮೆರಿಕಾದಲ್ಲಿ ಈಗ ನಾಲ್ಕನೇ ಅಲೆ ಆರಂಭವಾಗಿದ್ದು, ನಿತ್ಯ 1.5 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಸಾವಿನ ಸಂಖ್ಯೆ 300-400 ಇದೆ. ಮರಣ ಪ್ರಮಾಣ ತಗ್ಗಲು ಕಾರಣ ಅಲ್ಲಿನ ಶೇ. 70 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಲಸಿಕೆ ವಿತರಣೆ ಪ್ರಮಾಣ ಅರ್ಧದಷ್ಟು ಆಗಿಲ್ಲ. ಆದ್ದರಿಂದ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು. ಕೋವ್ಯಾಕ್ಸಿನ್, ಕೋವಿಶೀಲ್ಡ್ ಎರಡೂ ಪರಿಣಾಮಕಾರಿ ಲಸಿಕೆಗಳೇ ಆಗಿವೆ. ಹಾಗಾಗಿ ಯಾವುದನ್ನಾದರೂ ಪಡೆಯಬಹುದು. ಸದ್ಯ ಲಸಿಕೆ ಕೊರತೆ ಇದೆಯಾದರೂ, ತಿಂಗಳಾಂತ್ಯದ ವೇಳೆಗೆ ಸ್ಪುಟ್ನಿಕ್ ವಿ, ಅಮೆರಿಕಾದ ಫೈಜರ್ ಮತ್ತು ಮಾಡೆರ್ನಾ ವ್ಯಾಕ್ಸಿನ್ ಸಹ ಬರುವ ಸಾಧ್ಯತೆಗಳಿರುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಸರಳವಾಗಿ ಹಬ್ಬ ಆಚರಿಸಿ

ಕೋವಿಡ್ 3ನೇ ಅಲೆ ಯಾವಾಗ ಬರಬಹುದು ಎಂದು ಜನರಲ್ಲಿ ಆತಂಕ ಮೂಡಿದೆ. ಹಾಗೆಯೇ ಅದಕ್ಕೆ ಪರಿಹಾರವೂ ಅವರಲ್ಲೇ ಇದೆ. ಶ್ರಾವಣ ಮಾಸದ ಆರಂಭದೊಂದಿಗೆ (ವರಮಹಾಲಕ್ಷ್ಮೀ ಹಬ್ಬದಿಂದ ದೀಪಾವಳಿ ವರೆಗೂ) ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಬ್ಬಗಳೇ ಅಲ್ಲದೇ ಗ್ರಾಮೀಣ ಭಾಗಗಳಲ್ಲಿ ಊರ ಹಬ್ಬ, ಜಾತ್ರೆ, ರಥೋತ್ಸವ ಸೇರಿ ಉತ್ಸವಗಳು ಜರುಗಲಿವೆ. ಇದೇ ನೆಪ ಮಾಡಿಕೊಂಡು ಜನರು ಗುಂಪು ಸೇರಿದರೆ ಸ್ವತಃ ತಾವೇ ಕರೋನಾವನ್ನು ಆಹ್ವಾನಿಸಿದಂತೆ. ಹಾಗಾಗಿ ಈ ವರ್ಷವೂ ಜನರು ತಮ್ಮ ಮನೆಗಳಲ್ಲಿ ಸರಳವಾಗಿ ಹಬ್ಬ ಆಚರಿಸುವ ಮೂಲಕ ತಮ್ಮ ಹಾಗೂ ಕುಟುಂಬದ ಸದಸ್ಯರನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾಸ್ಕ್ ನಿಮ್ಮ ಸಂಗಾತಿ ಆಗಲಿ

ಲಸಿಕೆ ಪಡೆದವರು, ಕೋವಿಡ್ ಸೋಂಕಿನಿಂದ ಗುಣ ಹೊಂದಿದವರು ನಮ್ಮ ದೇವಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ನಾವಿನ್ನು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂಬ ಭಾವನೆ ಬೇಳೆಸಿಕೊಳ್ಳಬೇಡಿ. ಲಸಿಕೆ ಪಡೆದವರು ಪಡೆಯದವರು ಎಲ್ಲರೂ ಇನ್ನೂ ಒಂದರಿಂದ ಒಂದೂವರೆ ವರ್ಷಕಾಲ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆದ್ದರಿಂದ ಎಲ್ಲರ ಮೊದಲ ಸಂಗಾತಿ ಮಾಸ್ಕ್ ಆಗಿದ್ದಲ್ಲಿ ಒಳ್ಳೆಯದು ಎಂದರು.

ಜಾಲತಾಣ ಇರಲಿ ಕಡಿವಾಣ

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ಸೇರಿದಂತೆ ಕಾಯಿಲೆಗಳ ಕುರಿತು ತಪು್ಪ ಮಾಹಿತಿಗಳು ಹರಿದಾಡುತ್ತಿವೆ. ಕೋವಿಡ್ ವೈರಸ್ ಎಂಬುದೇ ಇಲ್ಲ. ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾವನ್ನಪು್ಪತ್ತಾರೆ ಎಂಬಿತ್ಯಾದಿ ಸುಳ್ಳು ಸಂದೇಶಗಳು ಹರಿದಾಡುತ್ತಿವೆ. ಆದ್ದರಿಂದ ಜನರು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ವೀಕ್ಷಿಸಬಾರದು. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ. ನಾನಾ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು, ಗರ್ಭಿಣಿ ಮತ್ತು ಬಾಣಂತಿಯರು ಸೇರಿದಂತೆ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

ಉತ್ತಮ ಆರೋಗ್ಯದ ಗುಟ್ಟು

ಜನರು ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಮೂಲಕ ಯಾವುದೇ ಔಷಧ ಮಾತ್ರೆಗಳಿಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ವ್ಯಾಯಾಮ ಮಾಡಬೇಕು. ಹೆಚ್ಚು ನಡಿಗೆ ಒಳ್ಳೆಯದು. ತರಕಾರಿ, ಹಣ್ಣು, ಕಾಳುಗಳು ಸೇರಿ ಪೌಷ್ಠಿಕ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಈ ಕ್ರಮಗಳಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದ ಅವರು, ‘‘ ನಾನು ಮನೆ ಮತ್ತು ಕೆಲಸದ ಸ್ಥಳ ಸೇರಿ ನಿತ್ಯ 9 ಸಾವಿರ - 10 ಸಾವಿರ ಹೆಜ್ಜೆ ನಡೆಯುತ್ತೇನೆ. ಇದು ಪ್ರತಿ ದಿನ ತಪ್ಪದೇ ಮಾಡುತ್ತೇನೆ. ದಿನದಲ್ಲಿ ಇದು ಸಾಧ್ಯವಾಗದಿದ್ದರೆ ರಾತ್ರಿ 11-12 ಗಂಟೆಯಲ್ಲಿ ನಡೆದು ಅದನ್ನು ಪೂರ್ಣಗೊಳಿಸುತ್ತೇನೆ ಎಂದರು.

ಶೇ. 5-10 ಮಂದಿಗೆ ಆರೋಗ್ಯ ಸಮಸ್ಯೆ

ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಶೇ. 5-10 ಮಂದಿಯಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇನ್ನು ಮಧುಮೇಹ ಹೊಂದಿದರವಲ್ಲಿ ಕೋವಿಡ್ ಸೋಂಕು ತೀವ್ರತೆ ಹೆಚ್ಚಿರುತ್ತದೆ. ಮಧುಮೇಹ ಇಲ್ಲದವರು ಸೋಂಕಿಗೆ ಒಳಗಾದವರಲ್ಲಿ ನಂತರ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಕೆಲವರಿಗೆ ತೂಕ ಕಡಿಮೆ ಆಗಬಹುದು, ಅಲರ್ಜಿ, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಡಲಿವೆ. ಇವೇ ಅಲ್ಲದೆ ಖಿನ್ನತೆಯೂ ಕಾಡಲಿದೆ. ಹಾಗಾಗಿ ಸೋಂಕಿತರ ನಡುವೆ ದೈಹಿಕ ಅಂತರವಿರಲಿ. ಮಾನಸಿಕ ಅಂತರ ಬೇಡ ಎಂದು ಹೇಳಿದರು.

ಮಾಧ್ಯಮಗಳು ಅಭಿನಂದನಾರ್ಹ

ಇಡೀ ಜಗತ್ತನೇ ಕಾಡುತ್ತಿರುವ ಕೋವಿಡ್ ಸೋಂಕು ಕುರಿತು ಕಾಲ ಕಾಲಕ್ಕೆ ಮಾಹಿತಿ ನೀಡುವ ಮೂಲಕ ಜನರನ್ನು ಜಾಗೃತಗೊಳಿಸಲಾಗುತ್ತಿದೆ. ಕರೊನಾ ಸೋಂಕು, ರೋಗ ಲಕ್ಷಣ, ಲಸಿಕೆ, ಸಾಧಕ ಬಾಧಕಗಳು, ನ್ಯೂನತೆಗಳ ಕುರಿತು ಜನರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವಲ್ಲಿ ಮಾಧ್ಯಮಗಳ ಪಾತ್ರ ಅಭಿನಂದನಾರ್ಹವಾದದ್ದು ಎಂದು ನುಡಿದರು.

ಮೂರನೇ ಅಲೆ ಎಲ್ಲರಿಗೂ ಅಪಾಯ

ಮೂರನೇ ಅಲೆ ಮಕ್ಕಳಿಗೆ ಮಾತ್ರ ಅಪಾಯ ಎಂಬ ಸುದ್ದಿ ಇದೆ. ಹಾಗಾಗಿ ದೊಡ್ಡವರಿಗೆ ಬರುವುದೇ ಇಲ್ಲ ಎಂಬ ನಿರ್ಲಕ್ಷ್ಯ ಬೇಡ. ಅದು ಎಲ್ಲಾ ವಯೋಮಾನದವರಿಗೂ ಬರುತ್ತದೆ. ಹಾಗಾಗಿ ಮಕ್ಕಳು ಮಾತ್ರವಲ್ಲದೆ, ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು.

ಹೊಸ ಅವತಾರ ತಾಳಬಹುದು

ಕೋವಿಡ್ ಮೊದಲ ಅಲೆಯಲ್ಲಿ ಅಂತಹ ಸಮಸ್ಯೆ ಎದುರಿಸಲಿಲ್ಲ. ಆದರೆ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವೈರಸ್ ನಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಯಿತು. 3ನೇ ಅಲೆಯಲ್ಲೇ ಇದೇ ಮುಂದುವರೆದರೆ ಸಮಸ್ಯೆಯಿಲ್ಲ. ಕಾರಣ ಕೋವಿಡ್ ಲಸಿಕೆ ಅದರ ತೀವ್ರತೆ ತಡೆಯುವ ಶಕ್ತಿ ಹೊಂದಿದೆ. ಆದರೆ ವೈರಸ್ ರೂಪಾಂತರ ಗೊಂಡರೆ ಇಂತಿಷ್ಟೇ ಎಂದು ಹೇಳಲಾಗದು. ಅದರಿಂದ ರೋಗ ತೀವ್ರತೆ ಹಾಗೂ ಲಕ್ಷಣಗಳು ಬದಲಾದರೆ ಪರಿಣಾಮದ ಬಗ್ಗೆ ಈಗಲೇ ನಿಖರವಾಗಿ ಹೇಳಲಾಗದು ಎಂದರು.

ಬೂಸ್ಟರ್ ಡೋಸ್ ಬಗ್ಗೆ ಅಧ್ಯಯನ ಆಗಬೇಕು

ಸದ್ಯ ಬೂಸ್ಟರ್ ಡೋಸ್ ಅಗತ್ಯವಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಈ ಪಡೆಯುತ್ತಿರುವ ಲಸಿಕೆಯಲ್ಲಿ ಸೆಲ್ಯುಲಾರ್ ಇಮ್ಯೂನಿಟಿ ಹಾಗೂ ಆಂಟಿಬಾಡೀಸ್ ಇಮ್ಯೂನಿಟಿ ಎಂದು ಎರಡು ರೀತಿಯಲ್ಲಿ ರಕ್ಷಣೆ ಮಾಡುತ್ತದೆ. ಹಾಗಾಗಿ ಬೂಸ್ಟರ್ ಡೋಸ್ ಬಗ್ಗೆ ಅಧ್ಯಯನ ಆಗಬೇಕಿದೆ ಎಂದು ಹೇಳಿದರು.

ಶಾಲೆ ಆರಂಭಕ್ಕೆ ಸೂಕ್ತ ಕಾಲವಲ್ಲ

ಕೋವಿಡ್ ಹರಡುವಿಕೆಗೆ ನಿರ್ದಿಷ್ಟ ಕಾಲಮಾನ ಎಂದಿಲ್ಲ. ಜನರು ಎಚ್ಚರತಪ್ಪಿದರೆ ಅದು ಯಾವುದೇ ಕಾಲದಲ್ಲಾದರೂ ಹರಡುತ್ತದೆ. ಸದ್ಯ ನೆರೆ ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾಗಿದ್ದು, ಗಡಿ ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ದರದಲ್ಲಿ ಏರಿಕೆಯಾಗುತ್ತಿದೆ. ಯಾವಾಗ ಬೇಕಾದರೂ ತೀವ್ರಗೊಳ್ಳಬಹುದು. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಶಾಲೆ ಆರಂಭಿಸುವುದು ಸೂಕ್ತವಲ್ಲ.

ಉತ್ತಮ ಆರೋಗ್ಯದ ಗುಟ್ಟು

ಜನರು ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಮೂಲಕ ಯಾವುದೇ ಔಷಧ ಮಾತ್ರೆಗಳಿಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ವ್ಯಾಯಾಮ ಮಾಡಬೇಕು. ಹೆಚ್ಚು ನಡಿಗೆ ಒಳ್ಳೆಯದು. ತರಕಾರಿ, ಹಣ್ಣು, ಕಾಳುಗಳು ಸೇರಿ ಪೌಷ್ಠಿಕ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಈ ಕ್ರಮಗಳಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದ ಅವರು, ‘‘ ನಾನು ಮನೆ ಮತ್ತು ಕೆಲಸದ ಸ್ಥಳ ಸೇರಿ ನಿತ್ಯ 9 ಸಾವಿರ - 10 ಸಾವಿರ ಹೆಜ್ಜೆ ನಡೆಯುತ್ತೇನೆ. ಇದು ಪ್ರತಿ ದಿನ ತಪ್ಪದೇ ಮಾಡುತ್ತೇನೆ. ದಿನದಲ್ಲಿ ಇದು ಸಾಧ್ಯವಾಗದಿದ್ದರೆ ರಾತ್ರಿ 11-12 ಗಂಟೆಯಲ್ಲಿ ನಡೆದು ಅದನ್ನು ಪೂರ್ಣಗೊಳಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net