More

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

    ಸಭಾಂಗಣಗಳಲ್ಲಿ ಪುಸ್ತಕ, ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ, ಹೊರಾಂಗಣಗಳಲ್ಲಿ ನಡೆಯುವ ಸಭೆ-ಸಮಾರಂಭಗಳು ಯಾವುವೂ ನಡೆಯುತ್ತಿಲ್ಲ. ಹೆಚ್ಚೂಕಡಿಮೆ ಒಂದೂವರೆ ವರ್ಷದಿಂದ ಇರುವ ಇಂಥದ್ದೊಂದು ಪರಿಸ್ಥಿತಿ ಈಗ ಸ್ವಲ್ಪ ಸಡಿಲಗೊಂಡಿದ್ದರೂ ಹಿಂದಿನಂತೆ ಜನರು ನಿರಾಳವಾಗಿ ಒಂದೆಡೆ ಸೇರುತ್ತಿಲ್ಲ. ಪರಿಣಾಮವಾಗಿ ಸಾಹಿತಿಗಳು, ಕಲಾವಿದರು ತಮ್ಮ ಅಭಿಮಾನಿಗಳು-ಅನುಯಾಯಿಗಳಿಂದ ಸಂಪರ್ಕ ಕಳೆದುಕೊಂಡಂತಾಗಿದೆ. ಅವರಿಗೆಲ್ಲ ಆ ಸಂಪರ್ಕವನ್ನು ಮರಳಿ ಕೊಡುವಂಥ ಕೆಲಸವನ್ನು ಇದೀಗ ‘ಕ್ಲಬ್​ಹೌಸ್’ ಮಾಡುತ್ತಿದೆ.

    | ರವಿಕಾಂತ ಕುಂದಾಪುರ

    ಹೊರಗಡೆ ಎಲ್ಲಿಗೆ ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು, ಯಾರನ್ನೇ ಭೇಟಿಯಾದರೂ ಅಂತರ ಕಾಪಾಡಿಕೊಳ್ಳಬೇಕು. ಹೋದಲ್ಲೆಲ್ಲ ಸ್ಯಾನಿಟೈಸರ್ ಹಾಕಿಕೊಳ್ಳಬೇಕು, ಥರ್ಮಲ್ ಚೆಕಪ್​ಗೆ ಕೈಯೊಡ್ಡಬೇಕು. ಇಷ್ಟೆಲ್ಲ ಮುಂಜಾಗ್ರತೆ ವಹಿಸಿ ಹೊರಗೆ ಹೋಗಿ ಬಂದರೂ ಮನೆಗೆ ಬಂದ ತಕ್ಷಣ ಬಟ್ಟೆಯನ್ನು ಒಗೆಯಲು ಹಾಕಿ, ಸ್ನಾನ ಮಾಡಿದರಷ್ಟೇ ನಿರಾಳತೆ. ಇಲ್ಲದಿದ್ದರೆ ಮನಸಲ್ಲಿ ಒಂದು ಅಳುಕು. ಇದೇ ಕಾರಣಕ್ಕೆ ಎಷ್ಟೋ ಜನ ಹೊರಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಹೀಗಿದ್ರೂ ಇಲ್ಲೊಂದು ‘ರೂಮ್​ನಲ್ಲಿ ಮಾತ್ರ ನೂರಾರು ಮಂದಿ ಯಾವುದೇ ಅಳುಕಿಲ್ಲದೆ, ಮಾಸ್ಕ್- ಸ್ಯಾನಿಟೈಸರ್, ವೈಯಕ್ತಿಕ ಅಂತರದ ಗೋಜಿಲ್ಲದೆ ನಿರಾತಂಕವಾಗಿ ಸೇರಿ ಮಾತನಾಡುತ್ತಾರೆ!

    ಹೌದು.. ಮನೆಯೊಳಗೇ ಒಬ್ಬರಿಂದ ಒಬ್ಬರು ದೂರ ಇರಬೇಕಾದ ಪರಿಸ್ಥಿತಿಯಲ್ಲಿ ಒಂದು ‘ರೂಮ್​ನಲ್ಲಿ ನೂರಾರು ಮಂದಿ ನಿರಾಳವಾಗಿ ಸೇರಬಹುದಾದ ಸೌಲಭ್ಯವನ್ನು ‘ಕ್ಲಬ್​ಹೌಸ್’ ಎಂಬ ಆಪ್ ಒದಗಿಸಿದೆ. ಇದೀಗ ಎಷ್ಟರಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂದರೆ, ತಡರಾತ್ರಿ ನಿದ್ದೆ ಬರುತ್ತಿಲ್ಲ ಅಥವಾ ತುಂಬಾ ಬೋರಾಗುತ್ತಿದೆ ಅನಿಸಿದಾಗ ಒಮ್ಮೆ ‘ಕ್ಲಬ್​ಹೌಸ್’ ಓಪನ್ ಮಾಡಿ ನೋಡಿದರೆ ಅಲ್ಲಿ ಆಗಲೂ ಬಹಳಷ್ಟು ಮಂದಿ ಮಾತನಾಡುತ್ತಿರುತ್ತಾರೆ. ಆಸಕ್ತಿ ಇದ್ದರೆ ನಾವೂ ಕೈಯೆತ್ತಿ ಮಾತನಾಡಬಹುದು, ಇಲ್ಲವೇ ಅಲ್ಲಿನ ಮಾತುಗಳನ್ನು ಕೇಳುತ್ತ ಹಾಗೆಯೇ ನಿದ್ರೆಗೆ ಜಾರಬಹುದು.

    ಮತ್ತದೇ ಮುದ: ಕಳೆದುಕೊಂಡಿದ್ದ ಆ ಮಾತುಕತೆ, ಮೆಚ್ಚುಗೆಯ ಮಾತು, ಅಭಿಮಾನದ ನುಡಿ ಎಲ್ಲವನ್ನೂ ಈ ಕ್ಲಬ್​ಹೌಸ್ ಈಗ ಸ್ವಲ್ಪಮಟ್ಟಿಗೆ ಮರಳಿ ಸಿಗುವಂತೆ ಮಾಡಿದೆ. ಸಾಹಿತಿ, ನಟ, ಕಲಾವಿದ ಅಥವಾ ಉದ್ಯಮಿ ಯಾರೇ ಆಗಿರಲಿ, ಅವರಿಗೆ ತಮ್ಮನ್ನು ಅಭಿಮಾನದಿಂದ ನೋಡುವವರಿಂದ ಒಂದು ಮೆಚ್ಚುಗೆಯ ಮಾತು ನೇರವಾಗಿ ಕೇಳಿಸಿಕೊಳ್ಳುವ ಖುಷಿ ವಿಶೇಷವಾಗಿರುತ್ತದೆ. ಹಾಗೆಯೇ ಒಬ್ಬ ಅಭಿಮಾನಿಗೆ ತನ್ನ ನೆಚ್ಚಿನ ನಟ, ಸಾಹಿತಿ, ಕವಿ, ಗಾಯಕ ಅಥವಾ ತನ್ನ ಪ್ರೀತಿಯ ಇನ್ಯಾರೊಂದಿಗಾದರೂ ನೇರವಾಗಿ ಮಾತನಾಡಲು ಸಿಕ್ಕ ಅವಕಾಶದ ಆನಂದ ಅವರ್ಣನೀಯ. ಕ್ಲಬ್​ಹೌಸ್ ರೂಮ್ಲ್ಲಿ ಸಿಗುವ ಈ ಖುಷಿಯನ್ನು ‘ರೂಮಾಂಚನ’ ಎಂದರೂ ತಪ್ಪಿಲ್ಲ. ಮಾತಿನ ಖುಷಿಯಲ್ಲೇ ಏರಿಳಿವ ಹೃದಯದಬಡಿತ ‘ಕ್ಲಬ್​ಡಬ್’ ಎಂದೆನಿಸಿದರೂ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ, ಕರೊನಾ- ಲಾಕ್​ಡೌನ್​ನಿಂದಾಗಿ ದೂರವಾಗಿದ್ದ ಪರಸ್ಪರ ಮಾತುಕತೆಯಲ್ಲಿನ ಆ ಮುದ ಈಗ ಕ್ಲಬ್​ಹೌಸ್​ನಿಂದ ಮತ್ತೆ ಸಿಗುವಂತಾಗಿದ್ದೇನೋ ನಿಜ.

    ಏನೂ ಇಲ್ಲದಿರುವುದಕ್ಕಿಂತ…

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಮನುಷ್ಯನಿಗೆ ಸುದೀರ್ಘವಾಗಿ ಏಕಾಂತದಲ್ಲಿ ಇರುವುದು ಕಷ್ಟ, ಹೀಗಾಗಿ ಆತ ಮಾತನಾಡುತ್ತಿರಲು ಹಂಬಲಿಸುತ್ತಾನೆ. ಅಂಥ ಮಾತು ಈಗ ಕ್ಲಬ್​ಹೌಸ್​ನಿಂದ ಸಾಧ್ಯವಾಗಿದೆ. ಹಿಂದೆಲ್ಲ ಒಂದೆಡೆ ಸೇರಿ ನಾಟಕದ ಓದು, ಕಥಾವಾಚನ ಎಂದೆಲ್ಲ ಮಾಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಒಂದೆಡೆ ಸೇರಿ ಹಾಗೆ ಮಾಡುವುದು ಸಾಧ್ಯವಿರದಿದ್ದರೂ ಕ್ಲಬ್​ಹೌಸ್ ಮೂಲಕ ಅದನ್ನು ಮಾಡಬಹುದಾಗಿದೆ. ನನಗೂ ನನ್ನ ಹನಿಗವನಗಳ ಓದುಗರು ಕ್ಲಬ್​ಹೌಸ್​ನಲ್ಲಿ ಸಿಗುತ್ತಾರೆ. ಆದರೆ ಇಲ್ಲಿ ನಿಜವಾದ ಸಮಾರಂಭದಲ್ಲಿ ಮಾತನಾಡಿದಂತೆ ಅವರ ಮುಖದ ಭಾವನೆ ಇತ್ಯಾದಿ ಕಾಣಿಸುವುದಿಲ್ಲ. ಆದಾಗ್ಯೂ ‘ಸಮ್ಂಗ್ ಈಸ್ ಬೆಟರ್ ದ್ಯಾನ್ ನಥಿಂಗ್’ ಎನ್ನುವಂತೆ ಅಷ್ಟರಮಟ್ಟಿಗೆ ನೇರ ಮಾತುಕತೆ ಸಾಧ್ಯವಾಗುತ್ತಿದೆ ಎಂಬುದೇ ಸಂತಸದ ವಿಚಾರ.

    | ಎಚ್. ಡುಂಡಿರಾಜ್ ಹನಿಗವಿ

    ಖಿನ್ನತೆ ದೂರ ಆಗುತ್ತೆ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಇದು ಎರಡು ರೀತಿಯಲ್ಲಿ ಅನುಕೂಲಕರ. ಒಂದು, ಮಾತಾಡುವ ಜಾಗ ಎಂಬ ಕಾರಣಕ್ಕೆ. ಎರಡನೆಯದು, ಮನೆಯ ಒಳಗೇ ಕೂತು ಖಿನ್ನತೆಗೆ ಒಳಗಾದ ಜೀವಗಳಿಗೆ ಇದು ಬಿಡುಗಡೆ. ಮಾತು ಮನಸ್ಸಿಗೆ ಚಲನಶೀಲತೆ ಮತ್ತು ಆರೋಗ್ಯಕರ ಭಾವ ನೀಡುತ್ತದೆ. ಇದರ ಜತೆಗೆ ಮಿತಿಯೂ ಇದೆ. ಇಲ್ಲಿನ ಮಾತು ಗಾಳಿಯಲ್ಲಿ ಕಳೆದುಹೋಗುತ್ತಿದೆ. ಅದು ಉಳಿಯುವಂತಹ ವ್ಯವಸ್ಥೆ ಇದ್ದರೆ ಚೆನ್ನಾಗಿರುತ್ತದೆ. ಮಾತುಗಳು ಡಾಕ್ಯುಮೆಂಟ್ ಆಗುವಂತಿರಬೇಕು. ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆ ಬಂದರೆ, ಆಗ ಅದಕ್ಕೊಂದು ಶಾಶ್ವತತೆ, ಗಾಂಭೀರ್ಯ ಬರುತ್ತದೆ. ಹರಟೆಗೂ ಚರ್ಚೆಗೂ ಇದೇ ವ್ಯತ್ಯಾಸ.

    | ಬಿ. ಸುರೇಶ ನಿರ್ದೇಶಕ-ನಿರ್ಮಾಪಕ

    ನೇರ ಮಾತುಕತೆಗೆ ಅವಕಾಶವಾಗಿದೆ…

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಸಿನಿಮಾ ಬಿಡುಗಡೆ ಆಗುತ್ತಿಲ್ಲ, ಶೂಟಿಂಗ್ ಕೂಡ ವಿರಳ. ಹೀಗಾಗಿ ಅಭಿಮಾನಿಗಳೊಂದಿಗೆ ನಡೆಯುತ್ತಿದ್ದ ಆ ಮುಖಾಮುಖಿ-ಮಾತುಕತೆ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ನಾವು ಫೇಸ್​ಬುಕ್​ನಲ್ಲೋ, ಇನ್​ಸ್ಟಾಗ್ರಾಮ್​ನಲ್ಲೋ ಲೈವ್ ಬಂದು ಮಾತನಾಡಿದರೂ ಅಲ್ಲಿ ಕೇಳುಗರು ನಮ್ಮೊಂದಿಗೆ ಕಮೆಂಟ್ ಮಾಡಿ ಪ್ರತಿಕ್ರಿಯಿಸಬಹುದೇ ವಿನಃ ಸುಲಭದಲ್ಲಿ ನೇರ ಮಾತುಕತೆ ಕಷ್ಟ. ಆದರೆ ಕ್ಲಬ್​ಹೌಸ್​ನಿಂದಾಗಿ ಅಭಿಮಾನಿಗಳ ಪ್ರಶ್ನೆ, ಮೆಚ್ಚುಗೆ, ಅಭಿಮಾನ ಎಲ್ಲವನ್ನೂ ಮಾತಿನ ರೂಪದಲ್ಲಿ ನೇರವಾಗಿ ಕೇಳಿಸಿಕೊಳ್ಳಬಹುದಾಗಿದೆ.

    | ರಿಷಬ್ ಶೆಟ್ಟಿ ನಟ-ನಿರ್ದೇಶಕ

    ಕ್ಲಬ್​ಹೌಸನ್ನು ಗಬ್​ಹೌಸ್ ಮಾಡ್ಬೇಡಿ!

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಕ್ಲಬ್​ಹೌಸ್​ನಲ್ಲಿ ದೖಶ್ಯವಿಲ್ಲವಾದ್ದರಿಂದ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಕುಳಿತಿರಬೇಕು ಎಂಬ ಚಿಂತೆ ಇಲ್ಲ. ಸ್ಕ್ರೀನ್ ನೋಡುತ್ತಲೇ ಇರಬೇಕಾಗಿಯೂ ಇಲ್ಲ. ಕೇಳುತ್ತ ಕೆಲಸ ಮಾಡಬಹುದು. ತಮಗನಿಸಿದ್ದನ್ನು ಹೇಳಿ, ಹೊರನಡೆಯಬಹುದು. ಆದರೆ ಚರ್ಚಾ ಗುಂಪುಗಳಲ್ಲಿ ಹೆಚ್ಚಿನ ಉಪಯುಕ್ತ ವಿಷಯಗಳಿಲ್ಲ. ಯಾರು ಏನು ಬೇಕಾದರೂ ಮಾತಾಡಬಹುದಾದ್ದರಿಂದ ಜಾತಿ-ಮತ, ತೆಗಳಿಕೆಯೂ ಉಂಟು. ಬೇರೆ ಉಪಕರಣಗಳಿಂದ ರೆಕಾರ್ಡ್ ಮಾಡಿಕೊಳ್ಳಬಹುದು. ಇದರಿಂದ ಮುಂದೆ ಸಮಸ್ಯೆಗಳೂ ಎದುರಾಗಬಹುದು. ಇತ್ತೀಚೆಗೆ ಪೆಟ್ರೋಲ್ ದರ ಏರಿಕೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದೆ. ಇದೇ ರೀತಿ ಅನೇಕ ಚರ್ಚೆಗಳು ನಡೆಯುತ್ತವೆ. ಅಡುಗೆ ಕಲೆ, ರೈತರ ಸಮಸ್ಯೆ, ಆರ್ಥಿಕ ಹಗರಣ ಕೂಡ ರ್ಚಚಿಸಬಹುದು. ಮೋಸ ಹೋದವರು ತಮ್ಮ ಅನುಭವ ಹಂಚಿಕೊಂಡರೆ ಇತರರಿಗೂ ಅನುಕೂಲ. ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಕ್ಲಬ್​ಹೌಸ್ ಈಗಾಗಲೇ ಅನೇಕ ದೇಶಗಳಲ್ಲಿ ನಿಷೇಧವಾಗಿದೆ. ಇಲ್ಲಿಯೂ ಹಾಗೆ ಆಗದಂತೆ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು. ಬಾಯಿಗೆ ಬಂದಂತೆ ಮಾತನಾಡುತ್ತ ಕ್ಲಬ್​ಹೌಸನ್ನು ಗಬ್​ಹೌಸ್ ಮಾಡುವುದು ಬೇಡ.

    | ಎಂ. ಎಸ್. ನರಸಿಂಹಮೂರ್ತಿ ಖ್ಯಾತ ಹಾಸ್ಯ ಲೇಖಕರು

    ದುರುಪಯೋಗ ಆಗದಿರಲಿ…

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ನಾನು ಒಂದು ತಿಂಗಳಿಂದ ಕ್ಲಬ್​ಹೌಸ್​ನಲ್ಲಿ ಸಕ್ರಿಯವಾಗಿದ್ದೇನೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಎಲ್ಲ ಸಾಮಾಜಿಕ ಜಾಲತಾಣಗಳೂ ಬರು ಬರುತ್ತಾ ಸ್ವಲ್ಪ ದುರುಪಯೋಗಕ್ಕೆ ಒಳಗಾಗಿವೆ. ಕ್ಲಬ್​ಹೌಸ್ ಹಾಗೆ ಆಗದಿರಲಿ ಎಂಬುದು ನಮ್ಮ ಆಶಯ.

    | ಡಿ.ಸಿ.ರಾಜಪ್ಪ ನಿವೃತ್ತ ಡಿಸಿಪಿ

    ಜ್ಞಾನ-ಬಾಂಧವ್ಯ ವೃದ್ಧಿ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಅಭಿಮಾನಿಗಳ ಜತೆ ಸಂಪರ್ಕ ಸಾಧಿಸಲು, ವಿಚಾರ ವಿನಿಮಯಕ್ಕೆ ಒಳ್ಳೆ ವೇದಿಕೆ. ಸುಲಭವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು. ಇದರಿಂದ ಪರಸ್ಪರ ಬಾಂಧವ್ಯ ಹಾಗೂ ಜ್ಞಾನ ಇನ್ನಷ್ಟು ವೃದ್ಧಿಯಾಗುತ್ತಿದೆ.

    | ಎಸ್. ಷಡಕ್ಷರಿ ಉದ್ಯಮಿ

    ಇದು ಅಡಿಕ್ಷನ್ ಆಗ್ತಿದೆ!

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಗಾಯನವಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಿಗೂ ಇದರಿಂದ ಅನುಕೂಲ ಆಗಿದೆ. ಕೆಲವು ನೆಗೆಟಿವ್ ವಿಷಯಗಳೂ ಇವೆ. ಕೆಲವರಲ್ಲಿ ಇದೊಂದು ಚಟವಾಗುತ್ತಿದೆ. ಬಿಡುಬೀಸು ಮಾತು, ಕಚ್ಚಾಟ ಹೆಚ್ಚಾಗುತ್ತಿವೆ. ಚರ್ಚೆ ಹಾದಿ ತಪ್ಪುತ್ತವೆ.

    | ನಾಗೇಂದ್ರ ಪ್ರಸಾದ್ ಗೀತರಚನೆಕಾರ

    ಆರಂಭದಲ್ಲಿ ಸಾಕಪ್ಪಾ ಸಾಕು ಅನಿಸಿತು…

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...10 ದಿನಗಳ ಹಿಂದೆ ನಾನು ಕ್ಲಬ್​ಹೌಸ್ ಸೇರಿದೆ. ಎರಡೇ ದಿನಕ್ಕೆ ನನಗೆ ಬಹಳ ಸ್ಟ್ರೆಸ್ ಆಯಿತು. ಸಾಕಪ್ಪ ಸಾಕು ಅನಿಸಿತು. ಆದರೂ ಮುಂದುವರಿದೆ. ಬಿಡುವು ಇರುವವರಿಗೆ ಸಮಯ ಸದ್ಬಳಕೆ ಮಾಡಲು ಉತ್ತಮ ವೇದಿಕೆ ಇದು. ಎಲ್ಲ ಜಾಲತಾಣಗಳು ಬಂದಾಗ ಹೇಗೆ ಆರಂಭದಲ್ಲಿ ಆಕರ್ಷಕ ಅಂತ ಅನ್ನಿಸಿತೋ, ಇದೂ ಹಾಗೇ. ದುರ್ಬಳಕೆಯಾದರೆ ಅಪಾಯಕಾರಿಯೂ ಹೌದು.

    | ಜಯತೀರ್ಥ ಜಯಣ್ಣ ನಿರ್ದೇಶಕ

    ಇದರಲ್ಲಿ ಹೆಲ್ತ್ ವೈಬ್ಸ್ ಕೂಡ ಇದೆ…

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ...ಕ್ಲಬ್​ಹೌಸ್​ನಲ್ಲಿ ನಾನು ಮತ್ತು ಡಾ. ಬಾಬು ಸೇರಿ ‘ಹೆಲ್ತ್ ವೈಬ್ಸ್’ ರೂಂ ಆರಂಭಿಸಿ ಕಣ್ಣಿನ ಸುರಕ್ಷತೆ ಕುರಿತು ಕಾರ್ಯಕ್ರಮ ನಡೆಸುತ್ತಿದ್ದೇವೆ. ಕರೊನಾ ಜಾಗೃತಿ, ನೇತ್ರದಾನ, ಮಧುಮೇಹ, ಒತ್ತಡ ರಹಿತ ಜೀವನ ಕುರಿತು ಜಾಗೃತಿ ನಡೆಸುತ್ತಿದ್ದೇವೆ. ಉಪಯುಕ್ತ ಕಾರ್ಯಕ್ರಮ ಮಾಡಬಹುದು ಎಂಬುದಕ್ಕೆ ಇದೇ ಉದಾಹರಣೆ.

    | ಡಾ. ಭುಜಂಗ ಶೆಟ್ಟಿ ನಿರ್ದೇಶಕರು, ನಾರಾಯಣ ನೇತ್ರಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts