ಕೆಪಿಎಸ್‌ಸಿ ನೇಮಕಾತಿ ವಿವಾದ ಮತ್ತೆ ಕೆಎಟಿ ಅಂಗಳಕ್ಕೆ: ಮರುವಿಚಾರಣೆಗೆ ಅರ್ಜಿ ಹಿಂದಿರುಗಿಸಿದ ಹೈಕೋರ್ಟ್

high court
Published on

ಬೆಂಗಳೂರು: ಕೆಪಿಎಸ್‌ಸಿ 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿಯ 428 ಹುದ್ದೆಗಳ ಲಿಖಿತ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದಲ್ಲಿ ಉತ್ತರ ಪತ್ರಿಕೆಗಳ ಅಂಕಗಳನ್ನು ತಿದ್ದಲಾಗಿದ್ದು, ಅಂತಿಮ ಆಯ್ಕೆಪಟ್ಟಿಯನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಹೈಕೋರ್ಟ್ ವಾಪಸ್ ಕಳುಹಿಸಿದೆ.

ಅರ್ಜಿಗಳನ್ನು ಮುಂದಿನ 3 ತಿಂಗಳ ಒಳಗೆ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಕೆಎಟಿಗೆ ನಿರ್ದೇಶಿಸಿರುವ ಪೀಠ, ಪ್ರಕರಣ ಸಂಬಂಧ ಈಗಾಗಲೇ ಎಲ್ಲ ಪ್ರತಿವಾದಿಗಳೂ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ಕೆಎಟಿ ಹೊಸದಾಗಿ ನೋಟಿಸ್ ಜಾರಿ ಮಾಡುವ ಅಗತ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಜು. 19ರಂದು ಕೆಎಟಿ ಮುಂದೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

2020ರ ಜ.10ರಂದು ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿ ತಡೆ ಹಿಡಿಯುವಂತೆ ಕೋರಿ ಬಿ.ಕೆ. ಸುಧನ್ವ ಬಂಡೋಲ್ಕರ್, ವಿನಯ್ ಕುಮಾರ್ ರಾಮಯ್ಯ ಸೇರಿ 52 ಮಂದಿ ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿಗಳನ್ನು ಮರುವಿಚಾರಣೆ ನಡೆಸುವಂತೆ ಕೆಎಟಿಗೆ ನಿರ್ದೇಶಿಸಿದೆ.

ಹೈಕೋರ್ಟ್ ಆದೇಶವೇನು?

  • 2015ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ದತ್ತಾಂಶ ಸೇರಿ ಯಾವುದೇ ದಾಖಲೆಗಳನ್ನು ಕೆಪಿಎಸ್‌ಸಿ ನಾಶಪಡಿಸದೇ ಕೆಎಟಿ ಮುಂದೆ ಹಾಜರುಪಡಿಸಬೇಕು.
  • ಡಿಜಿಟಲ್ ಮೌಲ್ಯಮಾಪನ ನಡೆಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಸಹ ತನ್ನ ಬಳಿಯಲ್ಲಿರುವ ಎಲ್ಲ ದಾಖಲೆಗಳನ್ನು ಕೆಎಟಿ ಮುಂದೆ ಹಾಜರುಪಡಿಸಬೇಕು.
  • ಸರ್ಕಾರ ನಡೆಸಿರುವ ಎಲ್ಲ ನೇಮಕಾತಿ ಪ್ರಕ್ರಿಯೆಯು ಅರ್ಜಿ ಸಂಬಂಧ ಕೆಎಟಿ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ.
  • ಪ್ರಕರಣದ ಸಂಬಂಧ ಹೈಕೋರ್ಟ್ ಮೆರಿಟ್ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದ್ದರಿಂದ, ಲಭ್ಯ ದಾಖಲೆಗಳ ಆಧಾರದ ಮೇಲೆ ವಿಚಾರಣೆ ನಡೆಸಲು ಕೆಎಟಿ ಮುಕ್ತ ಅವಕಾಶ ಹೊಂದಿದೆ.
  • ಹೈಕೋರ್ಟ್‌ಗೆ ಹಾಜರಾಗಿರುವ ಆಯ್ಕೆಯಾದ ಅಭ್ಯರ್ಥಿಗಳೂ ಕೆಎಟಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಕರಣವೇನು?

2015ನೇ ಸಾಲಿನ ಒಟ್ಟು 428 ಗೆಜಿಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ 2017ರ ಜನವರಿಯಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಗಳ ನಂತರ 2020ರ ಜ.10ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು. ಈ ಸಾಲಿನ ಲಿಖಿತ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನಕ್ಕೆ ಟಿಸಿಎಸ್‌ಗೆ ವಹಿಸಿತ್ತು. ಮೌಲ್ಯಮಾಪನ ಮಾಡಿದ ಸಂಸ್ಥೆಯೇ ಫಲಿತಾಂಶ ಪ್ರಕಟಿಸಬೇಕಾಗಿತ್ತು. ಆದರೆ, ಸೆಂಟರ್ ಫಾರ್ ಇ-ಗವರ್ನೆನ್ಸ್‌ನಿಂದ (ಸಿಇಜಿ) ಫಲಿತಾಂಶ ಪ್ರಕಟವಾಗಿತ್ತು. ಇದರಿಂದ, ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಅವಕಾಶವಂಚಿತ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಪ್ರತಿ ನೀಡುವಂತೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೇಳಿದ್ದರೂ, ಕೆಪಿಎಸ್‌ಸಿ ನೀಡಿರಲಿಲ್ಲ. ಈ ಕ್ರಮ ಪ್ರಶ್ನಿಸಿ ಅನೇಕರು ಕೆಎಟಿ ಮೊರೆ ಹೋಗಿದ್ದರು. ಆದರೆ, ಅರ್ಜಿದಾರರು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ತಿಳಿಸಿ ಕೆಎಟಿ ಅರ್ಜಿ ವಜಾಗೊಳಿಸಿತ್ತು. ಕೆಎಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿಯಲ್ಲಿ ರಾಜ್ಯ ಸರ್ಕಾರ, ಕೆಪಿಎಸ್‌ಸಿ, ಟಿಸಿಎಸ್ ಹಾಗೂ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸೇರಿ 438 ಜನರನ್ನು ಪ್ರತಿವಾದಿಯನ್ನಾಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net