ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ?; ಕೊನೆಗೂ ಯಾವಾಗ ಅಂತ ಹೇಳಿ ತಲೆಗೆ ಹುಳ ಬಿಟ್ಟ ರಿಯಲ್​ ಸ್ಟಾರ್​!

Untitled-1
Published on

ಬೆಂಗಳೂರು: ರಿಯಲ್​ ಸ್ಟಾರ್ ಉಪೇಂದ್ರ ಅವರಿಗೆ ಸಾಮಾನ್ಯವಾಗಿ ಎಲ್ಲೆಂದರಲ್ಲಿ ಎದುರಾಗುವ ಪ್ರಶ್ನೆ ಎಂದರೆ 'ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ?' ಎಂಬುದೇ ಆಗಿರುತ್ತದೆ. ಅದರಲ್ಲೂ ಜನ್ಮದಿನವಾದ ಸೆ. 18ರಂದು ಅವರೇನಾದರೂ ತಮ್ಮ ನಿರ್ದೇಶನದ ಹೊಸ ಸಿನಿಮಾ ಕುರಿತು ಘೋಷಣೆ ಮಾಡಬಹುದಾ? ಎಂಬ ಕುತೂಹಲ ಕಳೆದ ನಾಲ್ಕೈದು ವರ್ಷಗಳಿಂದಲೂ ಇರುವಂಥದ್ದೇ. ಇದೀಗ ಅವರ ಜನ್ಮದಿನ ಸಮೀಪದಲ್ಲಿರುವ ಕಾರಣ ಅಂಥದ್ದೊಂದು ಕುತೂಹಲ ಹಲವರಲ್ಲಿದೆ.

ಎಲ್ಲದರಲ್ಲೂ ಡಿಫರೆಂಟ್ ಎನಿಸಿಕೊಂಡಿರುವ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಸಿನಿಮಾ ಘೋಷಣೆ ವಿಷಯದಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಗಳಿಂದ ಹಿಡಿದು, ಕಥೆ-ಸಂಭಾಷಣೆ-ಸಂಗೀತ ಎಲ್ಲದರಲ್ಲೂ ಸಾಮಾನ್ಯವಾಗಿ ವಿಭಿನ್ನತೆ ತೋರುವ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಕುರಿತು ಕೂಡ ಅಂಥದ್ದೇ ಒಂದು ರೀತಿಯಲ್ಲಿ ಹೇಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ.

ಒಂದು ಎರಡನೇ ಅಲೆ ಬಳಿಕ ಇದೀಗ ಕರೊನಾ ಮೂರನೇ ಅಲೆಯ ಆತಂಕ ಕಾಡುತ್ತಿದೆ. ಅಷ್ಟಕ್ಕೂ ಕರೊನಾಗೆ ಸಂಬಂಧಿಸಿದಂತೆ ಎಷ್ಟು ಅಲೆ ಬರಬಹುದು, ಅಸಲಿಗೆ ಕರೊನಾ ಎಷ್ಟು ದಿನ ಇರಬಹುದು ಎಂದು ಯಾರೂ ಸ್ಪಷ್ಟವಾಗಿ ಹೇಳಲಾಗದ ಈ ಸಂದರ್ಭದಲ್ಲಿ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾ ಯಾವಾಗ ಎಂಬುದನ್ನು ಹೇಳಿದ್ದಾರೆ. 'ನಾನು ನನ್ನ ನಿರ್ದೇಶನದ ಸಿನಿಮಾವನ್ನು ಕೋವಿಡ್ ಪರಿಸ್ಥಿತಿ ನೋಡಿ ಅನೌನ್ಸ್ ಮಾಡುತ್ತೇನೆ' ಎನ್ನುವ ಮೂಲಕ ಅಭಿಮಾನಿಗಳು, ಸಿನಿಪ್ರಿಯರು 'ಯಾವಾಗ?' ಎಂದು ತಲೆ ಕೆರೆದುಕೊಳ್ಳುವಂತೆ ಮಾಡಿದ್ದಾರೆ ಉಪ್ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net