

ಹಾಸನ: ಪ್ರಿಯಕರ ಮತ್ತು ಆತನ ಸಹಚರನಿಂದ ಗಂಡನನ್ನೇ ಕೊಲೆ ಮಾಡಿಸಿ, ಬಳಿಕ ಅದನ್ನು ಅಪಘಾತ ಎಂಬಂತೆ ಬಿಂಬಿಸಿದ್ದ ಹೆಂಡತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಮೂಲಕ ಮುಚ್ಚಿ ಹೋಗಬಹುದಾಗಿದ್ದ ಪ್ರಕರಣವೊಂದನ್ನು ಪೊಲೀಸರು ಭೇದಿಸಿ ಬಯಲಿಗೆಳೆದಿದ್ದಾರೆ.
ಪತ್ನಿ ಶ್ರುತಿ, ಪ್ರಿಯಕರ ಚಂದ್ರಶೇಖರ ಹಾಗೂ ಆತನ ಸ್ನೇಹಿತ ಕಿರಣ್ ಬಂಧಿತ ಆರೋಪಿಗಳು. ಕೊಡಗು ಶನಿವಾರಸಂತೆ ನಿವಾಸಿ ಸಂತೋಷ್ ಹೆಂಡತಿಯಿಂದಲೇ ಕೊಲೆಗೀಡಾದ ಪತಿ. ಕಳೆದ ಡಿಸೆಂಬರ್ 26ರಂದು ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮರಡಿಕೆರೆ ಗ್ರಾಮದಲ್ಲಿ ಈ ಪ್ರಕರಣ ನಡೆದಿತ್ತು.
ಪತಿಯನ್ನು ಕೊಲೆ ಮಾಡಿಸುವ ಸಲುವಾಗಿ ಈಕೆ ಪ್ರಿಯಕರನಿಗೆ ಮಾಹಿತಿ ನೀಡಿದ್ದಳು. ಗಂಡ ಗಾರೆ ಕೆಲಸ ಮುಗಿಸಿ ಬರುತ್ತಿದ್ದಾಗ ಮಾರ್ಗಮಧ್ಯೆ ಎದುರಾದ ಚಂದ್ರಶೇಖರ, ಸಂತೋಷ್ ಬೈಕ್ ತಡೆದು ನಿಲ್ಲಿಸಿ, ತನ್ನ ಕಾರು ಕೆಟ್ಟಿದೆ, ಸಹಾಯಕ್ಕೆ ಬಾ ಎಂದು ಕರೆದಿದ್ದ.
ಸಹಾಯಕ್ಕೆಂದು ಬಂದ ಸಂತೋಷ್ ಮೇಲೆ ರಾಡ್ನಿಂದ ಹಲ್ಲೆ ಮಾಡಿದ ಚಂದ್ರಶೇಖರ ಮತ್ತು ಕಿರಣ್, ಬಳಿಕ ಶವವನ್ನು ಬೈಕ್ ಮೇಲೆ ಹಾಕಿ ಅದು ಅಪಘಾತ ಎಂಬಂತೆ ಬಿಂಬಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಇನ್ಸ್ಪೆಕ್ಟರ್ ಚೈತನ್ಯ ಮತ್ತು ತಂಡ ಈ ಪ್ರಕರಣವನ್ನು ಭೇದಿಸುವ ಮೂಲಕ ಮುಚ್ಚಿಹೋಗಬಹುದಾಗಿದ್ದ ಸಂಗತಿಯನ್ನು ಬಯಲಿಗೆಳೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.