

ಹಾವೇರಿ: ವಾಹನ ಪೂಜೆ ಮಾಡುತ್ತಿದ್ದ ನಿವೃತ್ತ ಅಧಿಕಾರಿ ಮೇಲೆ ದಾಳಿ ಇಟ್ಟ ಹೆಜ್ಜೇನು ನೊಣಗಳು ಕಚ್ಚಿದ್ದು, ಅವುಗಳ ಕಡಿತದಿಂದ ತೀವ್ರ ಸಂಕಟ ಅನುಭವಿಸಿ ಅವರು ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಪ್ರಭಾಕರ ಅತ್ತಿಗೇರಿ ( 65) ಸಾವಿಗೀಡಾದವರು. ಇಂದು ಅವರು ವಾಹನ ಪೂಜೆ ಮಾಡುತ್ತಿದ್ದು, ಅದೇ ಸಂದರ್ಭಕ್ಕೆ ಹೆಜ್ಜೇನುಗಳು ದಾಳಿ ಇಟ್ಟಿವೆ. ದೊಡ್ಡಪ್ರಮಾಣದಲ್ಲಿ ದಾಳಿ ಇಟ್ಟ ಜೇನ್ನೊಣಗಳು ಗಾಯಗೊಳಿಸಿವೆ.
ಕಡಿತ ತಾಳಲಾರದೆ ಪ್ರಭಾಕರ ಅವರು ನೋವಿನಿಂದ ಚೀರಾಡಿದರೂ ಸಾರ್ವಜನಿಕರು ರಕ್ಷಣೆಗೆ ಧಾವಿಸಲು ಹೆದರಿದರು. ಸುಮಾರ ಅರ್ಧಗಂಟೆ ಕಾಲ ಮನೆ ಮುಂದೆ ಒದ್ದಾಡಿದ ಅವರನ್ನು ಬಳಿಕ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾದರು.
ಪ್ರಭಾಕರ ಅಂಚೆ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿದ್ದು, ನವೋದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.