

ಉತ್ತರಪ್ರದೇಶ: ದಂಪತಿಗಳನ್ನು ಕೊಲೆ ಮಾಡಿ, ಹಣ ದೋಚಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ 12 ವರ್ಷದ ಬಾಲಕ ಸೇರಿದಂತೆ ಇನ್ನಿಬ್ಬರನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ನವೆಂಬರ್ 22ರಂದು ಗುಜರಿ ವ್ಯಾಪಾರಿ ಇಬ್ರಾಹಿಂ ಎಂಬಾತನ ಮೃತದೇಹ ಮನೆಯೊಳಗೆ ಪತ್ತೆಯಾಗಿದ್ದರೆ, ಪತ್ನಿ ಹಜ್ರಾ ಮೃತದೇಹ, ಜಮೀನಿನಲ್ಲಿರುವ ಶೌಚಾಲಯದ ಬಳಿ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡು ಪತ್ತೆಯಾಗಿತ್ತು. ಇದಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ತನಿಖೆ ನಡೆಸಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ದಂಪತಿಗಳನ್ನು ಕೊಲೆ ಮಾಡಿ ದರೋಡೆ ಮಾಡಿರುವ ಪ್ರಕರಣದ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ ಎಂಬುದನ್ನು ಇದೀಗ ಪೊಲೀಸರು ತಿಳಿಸಿದ್ದಾರೆ. ಬಂಧಿತ ಬಾಲಕ, ಗುಜರಿ ವ್ಯಾಪಾರಿಗೆ ಚಿರಪರಿಚಿತನಾಗಿದ್ದ. ಮೃತ ಇಬ್ರಾಹಿಂ ಗುಜರಿ ವ್ಯಾಪಾರದಿಂದ ಸಂಪತ್ತು ಗಳಿಸಿಕೊಂಡಿದ್ದಾರೆ ಎಂಬುದನ್ನು ಅರಿತಿದ್ದ. ಇದನ್ನೇ ಬಂಡವಾಳವಾಗಿಟ್ಟುಕೊಂಡು ದಂಪತಿಗಳನ್ನು ಕೊಲೆ ಮಾಡಿ ಹಣ ದೋಚಿದ್ದಾರೆ.
12 ವರ್ಷದ ಬಾಲಕನಿಗೆ ತಾನೊಬ್ಬನೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ. ಹೀಗಾಗಿ ತನ್ನ ಯೋಜನೆಗೆ ಮೂವರು ಯುವಕರನ್ನು ಸೇರಿಸಿಕೊಂಡಿದ್ದಾನೆ. ನಂತರ ಕೊಲೆ ಕೃತ್ಯ ಮಾಡಿದ್ದಾನೆ. ಇದೀಗ ಅಪ್ರಾಪ್ತ ಬಾಲಕನೊಂದಿಗೆ ಕೊಲೆ ಕೃತ್ಯದಲ್ಲಿ ತೊಡಗಿಸಿಕೊಂಡ ಮಂಜೇಶ್ ಮತ್ತು ಶಿವಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸಂದೀಪ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಬಂಧಿತರಿಂದ 12 ಸಾವಿರ ರೂ, ಒಂದು ಮೊಬೈಲ್ ಫೋನ್ ಹಾಗೂ ಒಂದು ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್ ಹಿರಿಯ ಪೊಲೀಸ್ ಅಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ.(ಏಜೆನ್ಸೀಸ್)