ತಾಯಿಯನ್ನು ಹತ್ಯೆ ಮಾಡಿ ಮಗುವಿನ ಅಪಹರಣ; ಹೀಗೇಕೆ ಮಾಡಿದರು ಈ ವೃದ್ಧ ದಂಪತಿ?!

young woman was killed
Published on

ಅಸ್ಸಾಂ: ಮಹಿಳೆಯೊಬ್ಬಳನ್ನು ಅಮಾನುಷವಾಗಿ ಹತ್ಯೆ ಮಾಡಿ, ಆಕೆಯ ಮಡಿಲಿನಲ್ಲಿದ್ದ ಹತ್ತು ತಿಂಗಳ ಕಂದಮ್ಮನನ್ನು ದಂಪತಿಗಳಿಬ್ಬರು ಅಪರಹಣ ಮಾಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಆರೋಪಿಗಳು ತಮ್ಮ ಮಗಳಿಗೆ ಮಕ್ಕಳಿಲ್ಲ ಎಂದು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ಸಿಮಲುಗೂರು ಎಂಬ ಹಳ್ಳಿಯಿಂದ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಹೀಗಿರುವಾಗಲೇ ಜಿಲ್ಲೆಯ ರಾಜಬರಿ ಟೀ ಎಸ್ಟೇಟ್‌ನ ಚರಂಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಕೂಡಲೇ ವೈದ್ಯಕೀಯ ಪರೀಕ್ಷೆಯ ಪತ್ತೆಯಾಗಿರುವ ಮೈತದೇಹ ನಾಪತ್ತೆಯಾಗಿರುವ ಮಹಿಳೆಯದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ. ನಂತರ ತನಿಖೆಗಿಳಿದ ಪೊಲೀಸರು ಸಿಮಲುಗುರಿ ರೈಲ್ವೇ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ಹಿರಾಮಾಯಿ ಅಲಿಯಾಸ್ ಪ್ರನಾಲಿ ಗೊಗೊಯ್, ಬಸಂತ ಗೊಗೊಯ್, ಪ್ರಶಾಂತ್, ಬಾಬಿ ಲುಖುರಾಖೋನಿ ಬಂಧಿತ ಆರೋಪಿಗಳು.

ಬಂಧಿತ ಆರೋಪಿ ದಂಪತಿಗಳ ಮಗಳು ಹಿಮಾಚಲ ಪ್ರದೇಶದಲ್ಲಿ ವಾಸವಾಗಿದ್ದಳು. ಈಕೆಗೆ ಮಕ್ಕಳಿರಲಿಲ್ಲ. ಹೀಗಾಗಿ ನಿತುಮೋನಿ ಲುಖುರಾಖೋನ್ ಎಂಬಾಕೆಯನ್ನು ಕೊಲೆ ಮಾಡಿ, ಆಕೆಯ ಮಗಳನ್ನು ಅಪಹರಣ ಮಾಡಿದ್ದರು. ನಂತರ ಮಗುವನ್ನು ತಮ್ಮ ಮಗಳಿಗೆ ಹಸ್ತಾಂತರಿಸಲು ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ. ಕೂಡಲೇ ಆರೋಪಿಗಳ ಕೈಯ್ಯಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ.

ಇದೊಂದು ಪೂರ್ವಯೋಜಿತ ಹತ್ಯೆಯಾಗಿದೆ. ಮದುವೆಯಾಗಿ ಮಕ್ಕಳಿಲ್ಲದ ತಮ್ಮ ಮಗಳ ಕನಸನ್ನು ನನಸಾಗಿಸಲು ದಂಪತಿಗಳು ಈ ಕೃತ್ಯ ಎಸಗಿದ್ದಾರೆ. ಮನೆಯಲ್ಲಿ ಕೆಲಸವಿದೆ ಎಂದು ಹೇಳಿ ಮಗುವಿನ ತಾಯಿಯನ್ನು ಕರೆಸಿ, ಮಗುವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಗುವಿನ ತಾಯಿ ತಡೆದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net