

ನವದೆಹಲಿ: ಈಗಾಗಲೇ ಸಾವಿರಾರು ಮಂದಿಯನ್ನು ತನ್ನ ಮೃತ್ಯಕೂಪಕ್ಕೆ ಆಹುತಿ ಪಡೆದುಕೊಂಡು ಜಾಗತಿಕವಾಗಿ ಹರಡುತ್ತಾ ಸಾವಿನ ಭೀತಿಯನ್ನು ಹೆಚ್ಚಿಸುತ್ತಿರುವ ಮಾರಕ ಕೊರೊನಾ ವೈರಸ್ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಸೋಮವಾರ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ.
ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಒಟ್ಟಾಗಿ ಸೇರಿದ್ದ ಜನಸಮೂಹದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವ ಅಠವಳೆ ಸಹ ಪಾಲ್ಗೊಂಡರು. ಈ ವೇಳೆ "ಕೊರೊನಾ ಹೋಗು! ಹೋಗು ಕೊರೊನಾ" (ಕೊರೊನಾ ಗೋ! ಗೋ ಕೊರೊನಾ!) ಎಂದು ಘೋಷಣೆ ಕೂಗಿದರು.
ದೇಶಾದ್ಯಂತ ಹರಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಗ್ಗಿಸಲು ಕೇಂದ್ರ ಸರ್ಕಾರದ ತಯಾರಿಗೆ ಜನರ ಸಾಮೂಹಿಕ ಘೋಷಣೆಯು ಕೂಡ ನೆರವಾಯಿತು. ದೇಶದಲ್ಲಿ ಕೊರೊನಾ ವೈರಸ್ ಹೆಚ್ಚು ಭೀಕರತೆ ಸೃಷ್ಟಿಸದಿರಲು ಈಗಾಗಲೇ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ.
ಚೀನಾದ ವುಹಾನ್ ನಗರದಲ್ಲಿ ಸ್ಫೋಟಗೊಂಡ ಕೊರೊನಾ ವೈರಸ್ ಈಗಾಗಲೇ ಜಾಗತಿಕವಾಗಿ 4000 ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದೆ. ಭಾರತದಲ್ಲಿಯೂ 50 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಜನತೆಗೆ ನಿರಂತರವಾಗಿ ತಿಳಿಹೇಳುತ್ತಿದೆ. (ಏಜೆನ್ಸೀಸ್)