

ಗಾಜಿಯಾಬಾದ್: ಚೀನಾದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ರಾಯಭಾರಿ ಕಚೇರಿ ಚೀನಾದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸು ಕರೆತಂದಿತ್ತು. ಇದೀಗ ಇರಾನ್ನಲ್ಲಿಯೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇರಾನ್ನಲ್ಲಿದ್ದ 58 ಭಾರತೀಯರನ್ನು ಇಂದು ಸ್ವದೇಶಕ್ಕೆ ಕರೆತರಲಾಗಿದೆ.
ಇರಾನ್ನಲ್ಲಿ ಇದುವರೆಗೂ ಸುಮಾರು 7,000 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. 237 ಜನರು ಮೃತರಾಗಿದ್ದಾರೆ. 2,000ಕ್ಕೂ ಹೆಚ್ಚು ಭಾರತೀಯರು ಇರಾನ್ನಲ್ಲಿ ವಾಸವಿದ್ದು ಅವರನ್ನೆಲ್ಲ ಸ್ವದೇಶದಕ್ಕೆ ಕರೆತರುವ ವ್ಯವಸ್ಥೆಯನ್ನು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಾಡುತ್ತಿದೆ. ಅದರ ಮೊದಲ ಹಂತವಾಗಿ ನಿನ್ನೆ (ಮಾ.9) ಇಂಡಿಯನ್ ಏರ್ಫೋರ್ಸ್ನ C-17 ಏರ್ಕ್ರಾಫ್ಟ್ನನ್ನು ಭಾರತದಿಂದ ಇರಾನ್ಗೆ ಕಳುಹಿಸಲಾಗಿತ್ತು. ಅಲ್ಲಿಂದ 58 ಭಾರತೀಯರನ್ನು ಹೊತ್ತು ತಂದಿರುವ ಏರ್ಕ್ರಾಫ್ಟ್ ಇಂದು ಬೆಳಗ್ಗೆ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಭೂಸ್ಪರ್ಶ ಮಾಡಿದೆ.
ಭಾರತಕ್ಕೆ ಬಂದಿಳಿದಿರುವ ಭಾರತೀಯರನ್ನು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್, "58 ಭಾರತೀಯರನ್ನು ಹೊತ್ತಿದ್ದ C-17 ವಿಮಾನವು ಇರಾನ್ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಭಾರತೀಯ ರಾಯಭಾರಿ, ಭಾರತೀಯ ವೈದ್ಯಕೀಯ ತಂಡ ಮತ್ತು ಇಂಡಿಯನ್ ಏರ್ಫೋರ್ಸ್ನ ಸಹಾಯಕ್ಕೆ ಧನ್ಯವಾದಗಳು. ಸಹಕಾರ ತೋರಿದ ಇರಾನ್ನ ಆಡಳಿತಕ್ಕೆ ಧನ್ಯವಾದಗಳು. ಇನ್ನುಳಿದಿರುವ ಭಾರತೀಯರನ್ನು ಕರೆತರಲು ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)