'ನರೇಂದ್ರ ಮೋದಿಯವರೇ ನಿಮ್ಮ ಮಾತುಗಳು ನನ್ನ ಹೃದಯವನ್ನು ಸ್ಪರ್ಶಿಸಿದವು, ನಿಮಗೆ ನನ್ನ ಕೃತಜ್ಞತೆ...' ಶಶಿ ತರೂರ್​ ಟ್ವೀಟ್​..

Modi And Taroor 10 March 3
Published on

ನವದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ ಶಶಿ ತರೂರ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾ.9ರಂದು ಜನ್ಮದಿನ ಆಚರಿಸಿಕೊಂಡ ಶಶಿ ತರೂರ್(64)​ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ನಿಮ್ಮ ಚಿಂತನಾಶೀಲತೆ ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದು ಹೇಳಿದ್ದಾರೆ.

ಶಶಿ ತರೂರ್​ ಅವರು ಈ ಹಿಂದೆ ನರೇಂದ್ರ ಮೋದಿಯವರನ್ನು ಟೀಕಿಸಿದ್ದೂ ಉಂಟು. ಹಾಗೇ ಕೆಲವೊಮ್ಮೆ ಮೋದಿಯವರ ಪರ ವಹಿಸಿಕೊಂಡು ಮಾತನಾಡಿದ್ದೂ ಇದೆ. ಆದರೆ ತಮ್ಮ ಜನ್ಮದಿನದಂದೇ ಅವರನ್ನು ಮನತುಂಬಿ ಹೊಗಳಿದ್ದಕ್ಕೆ ಖಂಡಿತ ಕಾರಣವಿದೆ.

ಶಶಿ ತರೂರ್​ ಕೇರಳದವರು. ಅವರ ಮಾತೃಭಾಷೆ ಮಲೆಯಾಳಂ. ಪ್ರಧಾನಿ ನರೇಂದ್ರ ಮೋದಿಯವರು ಮಲೆಯಾಳಂನಲ್ಲೇ ತಮಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ತರೂರ್​ ಫುಲ್ ಖುಷಿಯಾಗಿದ್ದಾರೆ. ಮೋದಿಯವರು ತಮಗೆ ಕಳುಹಿಸಿದ ಗ್ರೀಟಿಂಗ್ ಕಾರ್ಡ್​ನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ತರೂರ್​, ನರೇಂದ್ರ ಮೋದಿಯವರೇ, ಮಲೆಯಾಳಂನ ಶುದ್ಧ ಸಾಹಿತ್ಯದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನನಗೆ ಹಾರೈಸಿದ ರೀತಿ ನನ್ನ ಹೃದಯ, ಮನಸನ್ನು ಸ್ಪರ್ಶಿಸಿತು ಎಂದು ಹೇಳಿದ್ದಾರೆ.

ಮಲೆಯಾಳಂನಲ್ಲಿ ಇರುವ ಮೋದಿಯವರ ಶುಭಾಶಯವನ್ನು ಶಶಿ ತರೂರ್​ ಅವರೇ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ಅದರ ಸಾರಾಂಶ ಹೀಗಿದೆ.: 'ನಿಮ್ಮ ಜನ್ಮದಿನಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರಲಿ. ಶಾಂತಿ, ಸಮಾಧಾನ, ಅದೃಷ್ಟಗಳೆಲ್ಲ ನಿಮ್ಮದಾಗಲಿ. ನಿಮ್ಮ ಸುದೀರ್ಘ ಕಾಲದ ಸಾರ್ವಜನಿಕ ಜೀವನದ ಅನುಭವ, ಪ್ರತಿಭೆಗಳು ಈ ರಾಷ್ಟ್ರನಿರ್ಮಾಣಕ್ಕೆ ವಿನಿಯೋಗವಾಗಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆ. ಮೋದಿಯವರಿಂದ ಶಶಿ ತರೂರ್​ಗೆ ಕಳಿಸಲ್ಪಟ್ಟ ಮಲೆಯಾಳಂ ಸಾಹಿತ್ಯದ ಶುಭಾಶಯಕ್ಕೆ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಗೇ ಶಶಿ ತರೂರ್​ ಅವರು ತಮ್ಮ ತಾಯಿಯೊಂದಿಗೆ ಬರ್ತ್​ ಡೇ ಔತಣಕೂಟದಲ್ಲಿ ಪಾಲ್ಗೊಂಡ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net