

ಚೆನ್ನೈ: ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಮುಂಬರುವ ದಿನಗಳಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ತಮಿಳುನಾಡು ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಫೆಬ್ರವರಿ ತಿಂಗಳಲ್ಲಿ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಉದಯನಿಧಿ ಸ್ಟಾಲಿನ್ ಅವರನ್ನು ಡಿಸಿಎಂ ಆಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ. ಜನವರಿ 21ರಂದು ಸೇಲಂನಲ್ಲಿ ಡಿಎಂಕೆ ಯುವ ಘಟಕದ ಸಭೆ ಆಯೋಜಿಸಲಾಗಿದ್ದು, ಇದಾದ ಬಳಿಕ ಡಿಸಿಎಂ ಹುದ್ದೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಕಾರ್ಯದರ್ಶಿ ಟಿಕೆಎಸ್ ಇಳಂಗೋವನ್, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಉದಯನಿಧಿ ಅವರು ಹೆಚ್ಚು ಸಕ್ರಿಯರಾಗಿದ್ಧಾರೆ. ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಬೇಕಿದ್ದು, ಮುಂದಿನ ದಿನಗಳಲ್ಲಿ ಇದರ ಬ್ಗಗೆ ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಎಐಎಡಿಎಂಕೆ ಹಿರಿಯ ನಾಯಕ ಸತ್ಯನ್, ಕುಟುಂಬ ರಾಜಕಾರಣಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಡಿಎಂಕೆ ಪಕ್ಷ. 2021ರಲ್ಲಿ ಉದಯನಿಧಿ ಸ್ಟಾಲಿನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದಾಗ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಅವರು ಸಚಿವರಾದರು. ಈಗ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
2026ರಲ್ಲಿ ಡಿಎಂಕೆ ಉದಯನಿಧಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಅಚ್ಚರಿಪಡಬೇಕಿಲ್ಲ. ತಂದೆ, ಮಗ, ಮೊಮ್ಮಗ ಮತ್ತು ಮರಿಮೊಮ್ಮಗ ಮಾತ್ರ ಡಿಎಂಕೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ತಳಮಟ್ಟದ ಕಾರ್ಯಕರ್ತ ಕೂಡ ಪಕ್ಷದ ಮುಖ್ಯಸ್ಥರಾಗಬಹುದು ಎಂಬುದಕ್ಕೆ ಎಐಎಡಿಎಂಕೆ ಉತ್ತಮ ಸಾಕ್ಷಿ ಎಂದು ಹಿರಿಯ ನಾಯಕ ಸತ್ಯನ್ ಹೇಳಿದ್ದಾರೆ.