

ಜೆರುಸಲೆಮ್: ವಿಶ್ವಸಂಸ್ಥೆಯ ಅಧಿಕೃತ ವಾಹನದಲ್ಲೇ ಲೈಂಗಿಕ ಕ್ರಿಯೆ ನಡೆಸಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದು ಮುಜುಗರ ಅನುಭವಿಸುವಂತೆ ಮಾಡಿದ್ದ ವಿಶ್ವಸಂಸ್ಥೆಯ ಉದ್ಯೋಗಿಗಳಿಬ್ಬರಿಗೆ ಕೊನೆಗೂ ಶಿಕ್ಷೆ ವಿಧಿಸಲಾಗಿದ್ದು, ಕೆಲಸದಿಂದ ಅಮಾನತು ಮಾಡಲಾಗಿದೆ.
ಇಸ್ರೇಲ್ನ ಮೆಡಿಟರೇನಿಯನ್ ಕರಾವಳಿ ಪ್ರದೇಶದಲ್ಲಿ ಬರುವ ಟೆಲ್ ಅವಿವ್ ನಗರದಲ್ಲಿ ಕಳೆದ ಈ ಘಟನೆ ನಡೆದಿತ್ತು. 18 ಸೆಕೆಂಡ್ವುಳ್ಳ ವಿಡಿಯೋ ತುಣುಕನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಯುಎನ್ (UN) ಎಂದು ಬರೆದಿರುವ ವಿಶ್ವಸಂಸ್ಥೆಯ ಕಾರಿನ ಹಿಂಬದಿ ಸೀಟಿನಲ್ಲಿ ವ್ಯಕ್ತಿಯೊಬ್ಬ ಕೆಂಪು ಬಣ್ಣದ ಧಿರಿಸು ತೊಟ್ಟಿರುವ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕಾಣುತ್ತದೆ.
ವಿಡಿಯೋದಲ್ಲಿರುವ ವ್ಯಕ್ತಿ ಟೀ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುತ್ತಾನೆ. ಮತ್ತೊಬ್ಬ ಪ್ರಯಾಣಿಕ ಕಾರಿನ ಮುಂಭಾಗದ ಸೀಟಿನಲ್ಲಿ ನಿದ್ರೆ ಹೋಗಿರುತ್ತಾನೆ. ಅದಾದ ಸ್ವಲ್ಪ ಸಮಯದಲ್ಲಿ ಕಾರು ಮುಂದಕ್ಕೆ ಚಲಿಸುವುದು ವಿಡಿಯೋದಲ್ಲಿ ದಾಖಲಾಗಿತ್ತು. ಈ ವಿಡಿಯೋ ಭಾರಿ ವೈರಲ್ ಆಗಿ, ವಿಶ್ವಸಂಸ್ಥೆಯ ಗಮನಕ್ಕೂ ಬಂದು ಮುಜುಗರ ಅನುಭವಿಸುವಂತಾಗಿತ್ತು.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಇಬ್ಬರು ಪುರುಷ ಉದ್ಯೋಗಿಗಳನ್ನು ವಿಶ್ವಸಂಸ್ಥೆ ಸಂಬಳರಹಿತ ರಜೆ ಮೇಲೆ ಕಳುಹಿಸಿತ್ತು. ಇದೀಗ ಇಬ್ಬರನ್ನು ಅಮಾನತು ಮಾಡಿರುವುದಾಗಿ ಖಚಿತಪಡಿಸಿದೆ. ವಿಡಿಯೋದಲ್ಲಿದ್ದ ಮಹಿಳೆ ಯಾರೆಂಬುದನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿಲ್ಲ. ಪುರುಷ ಉದ್ಯೋಗಿಗಳನ್ನು ಸಸ್ಪೆಂಡ್ ಮಾಡಿದೆ. ಇಬ್ಬರು ವಿಶ್ವಸಂಸ್ಥೆಯ ಟ್ರೂಸ್ ಮೇಲ್ವಿಚಾರಣಾ ಸಂಸ್ಥೆ (ಯುಎನ್ಟಿಎಸ್ಒ) ಉದ್ಯೋಗಿಗಳೆಂದು ತಿಳಿದುಬಂದಿದೆ. ಇದೊಂದು ಜೆರುಸಲೆಮ್ ಮೂಲದ ಶಾಂತಿಪಾಲನಾ ಪಡೆಯಾಗಿದೆ.
ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್, ವಿಡಿಯೋದಲ್ಲಿರುವುದನ್ನು ನೋಡಿ ನಾವು ಶಾಕ್ ಆದೆವು. ವಿಡಿಯೋದಲ್ಲಿರುವ ಉದ್ಯೋಗಿಗಳ ವರ್ತನೆ ಅಸಭ್ಯವಾಗಿತ್ತು. ಸಿಬ್ಬಂದಿಯ ವರ್ತನೆಯು ನಮ್ಮ ಹೋರಾಟ ಹಾಗೂ ನಿಲುವಿಗೆ ವಿರುದ್ಧವಾಗಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಈ ವಿಡಿಯೋ ಕಳೆದ ವಾರವೇ ವಿಶ್ವಸಂಸ್ಥೆಯ ಗಮನಕ್ಕೆ ಬಂದಿತ್ತು. ಆದರೆ, ಇದನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿರಲಿಲ್ಲ. ನೆಟ್ಟಿಗರ ವಿಡಿಯೋ ಕುರಿತು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಇದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ ಎಂದಿದ್ದರು. (ಏಜೆನ್ಸೀಸ್)