

ಗಾಂಧಿನಗರ (ಗುಜರಾತ್): ಗುಜರಾತ್ ರಾಜ್ಯಸಭಾ ಚುನಾವಣೆಗೆ ಇನ್ನೆರಡು ವಾರಗಳು ಮಾತ್ರ ಇವೆ. ಜೂನ್ 19ರಂದು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಇದಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಪಟೇಲ್ ಅವರು ವಡೋದರಾದ ಕರ್ಜನ್ ಸ್ಥಾನದಿಂದ ಹಾಗೂ ಚೌಧರಿ ವಲ್ಸಾದ್ನ ಕಪ್ರದ ಸ್ಥಾನದಿಂದ ಗೆದ್ದಿದ್ದರು.
ಇವರಿಬ್ಬರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದು, ಈ ಕುರಿತು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್ನಲ್ಲಿಯೇ ಕಾಂಗ್ರೆಸ್ಸಿನ ಐವರು ಶಾಸಕರು ರಾಜೀನಾಮೆ ನೀಡಿದ್ದರು.
ಗುಜರಾತಿನಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಬಿಜೆಪಿಯಿಂದ ಮೂವರು ಮತ್ತು ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅಭಯ್ ಭಾರದ್ವಾಜ್, ರಮಿಲಾ ಬಾರಾ ಮತ್ತು ನರ್ಹಾರಿ ಅಮೀನ್ ಹಾಗೂ ಕಾಂಗ್ರೆಸ್ನಿಂದ ಶಕ್ತಿಸಿಂಹ್ ಗೋಹಿಲ್ ಮತ್ತು ಭರತ್ ಸಿಂಹ್ ಸೋಲಂಕಿ ಚುನಾವಣೆಗೆ ಕಣದಲ್ಲಿದ್ದಾರೆ.
182 ಸದಸ್ಯರನ್ನು ಒಳಗೊಂಡಿರುವ ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ 103 ಶಾಸಕರು ಇದ್ದರೆ, ಕಾಂಗ್ರೆಸ್ನ 66 ಶಾಸಕರು ಇದ್ದರು.
ಕಾಂಗ್ರೆಸ್ನ ಶಾಸಕರಾದ ಕಿರಿತ್ ಪಟೇಲ್, ಲಲಿತ್ ವಾಸೋಯಾ ಮತ್ತು ಲಲಿತ್ ಕಗಥರಾ ಅವರು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಇದು ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಒಳಗಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ನಿರಾಕರಿಸಿರುವ ಶಾಸಕರು, ತಾವು ಕರೊನಾವೈರಸ್ ಕುರಿತಂತೆ ಚರ್ಚೆಗೆ ಹೋಗಿರುವುದಾಗಿ ಹೇಳಿದ್ದಾರೆ.
ಗುಜರಾತ್ನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆಯು ಮಾರ್ಚ್ 26ರಂದು ನಡೆಯಬೇಕಿತ್ತು. ಕರೊನಾ ವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ, ಇದನ್ನು ಜೂನ್ 19ಕ್ಕೆ ಮುಂದೂಡಲಾಗಿದೆ.