ಪತ್ನಿ ಮೇಲೆ ಸಂಶಯ: ಇಡೀ ಕುಟುಂಬವನ್ನು ಕೊಡಲಿಯಿಂದ ಕೊಚ್ಚಿದ ಪತಿ; ಇಬ್ಬರ ಕಗ್ಗೊಲೆ!

murder
Published on

ರೋಪರ್ (ಪಂಜಾಬ್​): ಒಂದೇ ಒಂದು ಸಂಶಯ ಮನುಷ್ಯರನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ ಎನ್ನುವುದಕ್ಕೆ ಪಂಜಾಬ್​ ರೋಪರ್ ಜಿಲ್ಲೆಯ ಮೊರಿಂಡಾ ಪಟ್ಟಣದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಪತ್ನಿಯ ಮೇಲೆ ಸಂದೇಹ ಪಟ್ಟುಕೊಂಡಿದ್ದ 30 ವರ್ಷದ ಯುವಕನೊಬ್ಬ ತನ್ನ ಪತ್ನಿ ಮಾತ್ರವಲ್ಲದೇ, ಆಕೆಯ ಇಡೀ ಕುಟುಂಬದವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈತನ ಈ ಬರ್ಬರ ಕೃತ್ಯಕ್ಕೆ ಪತ್ನಿ ಕಾಜಲ್​ ಮತ್ತು 12 ವರ್ಷದ ಬಾಲಕ ಬಲಿಯಾಗಿದ್ದು, ಉಳಿದವರು ಜೀವನ್ಮರಣಗಳ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಈ ಕೃತ್ಯ ಎಸಗಿದವನ ಹೆಸರು ಆಲಂ ಜೋಗಿ. ಈತ ತನ್ನ ಪತ್ನಿ, ಅತ್ತಿಗೆ, ಅತ್ತೆ ಮತ್ತು ಅವರ ಇಬ್ಬರು ಸೋದರಳಿಯರು ಸೇರಿದಂತೆ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಈ ಕೃತ್ಯ ಎಸಗಿದ್ದಾನೆ.

ಈತನಿಗೆ ತನ್ನ ಪತ್ನಿಯ ಮೇಲೆ ಶೀಲದ ಮೇಲೆ ಸದಾ ಶಂಕೆ. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾನೆ. ಆ ನಂತರ ವಿಷ ಸೇವಿಸಿ ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ.

ಎರಡು ವರ್ಷಗಳ ಹಿಂದೆ ಕಾಜಲ್​ ಜತೆ ಮದುವೆಯಾಗಿದ್ದ ಆಲಂ, ನಂತರ ತನ್ನ ಅತ್ತೆಯ ಮನೆಯಲ್ಲಿಯೇ ವಾಸವಾಗಿದ್ದ. ಹೆಂಡತಿಯ ಅಕ್ಕ ವಿದೇಶಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಅವರ ಇಬ್ಬರು ಮಕ್ಕಳು ಅದೇ ಮನೆಯಲ್ಲಿ ನೆಲೆಸಿದ್ದರು. ಆ ಪೈಕಿ 12 ವರ್ಷದ ಬಾಲಕ ಆಲಂನಿಂದ ಕೊಲೆಯಾಗಿದ್ದು, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಲಂನ ಅತ್ತೆ ಬಬ್ಲಿ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದರು. ಮಕ್ಕಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅವರ ಮೇಲೂ ಆಲಂ ಹಲ್ಲೆ ನಡೆಸಲು ಮುಂದಾಗಿದ್ದು, ಅವರು ಹೇಗೋ ತಪ್ಪಿಸಿಕೊಂಡಿದ್ದಾರೆ. ಅಳಿಯನ ಆಕ್ರೋಶದಿಂದ ದಿಗಿಲುಗೊಂಡ ಅವರು, ಕೂಡಲೇ ಅಲ್ಲಿಯೇ ಇದ್ದ ಆತನ 10 ತಿಂಗಳ ಶಿಶುವನ್ನು ಎತ್ತಿಕೊಂಡು ಬೇರೊಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಈ ಕಾರಣದಿಂದ ಮಗುವಿನ ಪ್ರಾಣ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net