

ನವದೆಹಲಿ: ಕ್ರೀಡಾ ವೃತ್ತಿಜೀವನದಲ್ಲಿ ಪ್ರತಿಯೊಬ್ಬರಿಗೂ ಏಳು ಬೀಳು ಇರುವುದು ಸಾಮಾನ್ಯದ ಸಂಗತಿ. ಭಾರತದಲ್ಲಿ ಕ್ರಿಕೆಟಿಗರು ಯಾವ ಸೆಲೆಬ್ರಿಟಿಗಳಿಗೇನು ಕಮ್ಮಿಯಿಲ್ಲ. ಅಂಥ ಆಟಗಾರರಿಗೆ ಕ್ರಿಕೆಟ್ ಜೀವವಾಗಿರುತ್ತದೆ. ಕ್ರಿಕೆಟ್ ಅನ್ನು ಧರ್ಮದಂತೆ ಪ್ರೀತಿಸುವ ಭಾರತದಲ್ಲಿ ಫಾರ್ಮ್ ಇದ್ದರಷ್ಟೇ ಕ್ರಿಕೆಟಿಗರಿಗೆ ಬೆಲೆ. ಇಲ್ಲವಾದರೆ ಆತನ ಕಷ್ಟ ಹೇಳತೀರದು. ಭಾರತ ತಂಡದಲ್ಲಿ ಮಿಂಚಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದರಂತೆ ರಾಬಿನ್. ನನ್ನ ಜೀವನದಲ್ಲಿ ಕ್ರಿಕೆಟ್ ಇಲ್ಲದಿದ್ದರೆ ಮನೆಯ ಬಾಲ್ಕನಿಯಿಂದ ಜಿಗಿಯುತ್ತಿದ್ದೆ ಅನಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಐಪಿಎಲ್ ಹೊರದೇಶದಲ್ಲಿ ಆಯೋಜನೆ ಸಾಧ್ಯತೆ
ಅಗ್ರಕ್ರಮಾಂಕದ ಬ್ಯಾಟ್ಸ್ಮನ್ ಆಗಿರುವ ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡದ ಪರ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡೆ ಎಂದು ವಿಷಾದಿಸಿದ್ದರು. ಸದ್ಯ ಮುಂದೂಡಲ್ಪಟ್ಟಿರುವ 2020ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 3 ಕೋಟಿಗೆ ಸೇಲಾಗಿದ್ದರು. 2013-14 ಹಾಗೂ 2014-15ರಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದ ಸದಸ್ಯರಾಗಿದ್ದರು.