

ಕನ್ನಡದ ಜನಪ್ರಿಯ ನಟ-ನಟಿಯರಿಗೆ ಕಿರುತೆರೆ ಹೊಸದೇನಲ್ಲ. ಈಗಾಗಲೇ ಹಲವರು ಧಾರಾವಾಹಿಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಈ ಸಾಲಿಗೆ ರಮೇಶ್ ಅರವಿಂದ್, ಪ್ರಿಯಾಂಕಾ ಉಪೇಂದ್ರ, ರಿಷಿ, ಅಜೇಯ್ ರಾವ್ ಸೇರಿಕೊಂಡಿದ್ದಾರೆ.
ಈ ಹೆಸರುಗಳನ್ನು ಕೇಳಿದರೆ ಆಶ್ಚರ್ಯವಾಗಬಹುದು. ಏಕೆಂದರೆ, ಇವರ್ಯಾರೂ ಕಿರುತೆರೆಗೆ ಹೊಸಬರಲ್ಲ. ರಮೇಶ್ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟರೆ, ರಿಷಿ ಕಿರುತೆರೆಯಿಂದಲೇ ಹಿರುತೆರೆಗೆ ಬಂದವರು. ಹಾಗಾಗಿ ಇದರಲ್ಲಿ ವಿಶೇಷವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ವಿಷಯವೇನೆಂದರೆ, ಉದಯ ಟಿವಿ ಮುಂದಿನ ಸೋಮವಾರದಿಂದ (ಜೂನ್ 8) ರೀಲಾಂಚ್ ಆಗುತ್ತಿದೆ. ಲಾಕ್ಡೌನ್ನಿಂದ ನಿಂತಿದ್ದ ಧಾರಾವಾಹಿಗಳೆಲ್ಲಾ, ಹೊಸ ಎಪಿಸೋಡುಗಳೊಂದಿಗೆ ವಾಪಸ್ಸು ಬರುತ್ತಿದೆ. ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ ಎಂಬ ಘೋಷವಾಕ್ಯ ಹೊತ್ತು ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಪ್ರಮುಖ ಧಾರಾವಾಹಿಗಳಲ್ಲೂ ಸಿನಿಮಾದ ಜನಪ್ರಿಯ ಕಲಾವಿದರು ಎಂಟ್ರಿ ಕೊಡುತ್ತಿದ್ದು, ಎಲ್ಲಾ ಧಾರಾವಾಹಿಗಳಿಗೆ ಹೊಸ ತಿರುವುಗಳನ್ನು ಕೊಡಲಿದ್ದಾರೆ.
ಈ ಪೈಕಿ ರಾತ್ರಿ ಏಳಕ್ಕೆ ಪ್ರಸಾರವಾಗುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಕೃಷ್ಣ ಅಜೇಯ್ ರಾವ್ ನಟಿಸಿದರೆ, 7.30ಕ್ಕೆ ಪ್ರಸಾರವಾಗುವ ಸೇವಂತಿ ಧಾರಾವಾಹಿಯಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಖುಷ್ಬೂ, ಈ ಹಿಂದೆ ತಮ್ಮದೇ ನಿರ್ಮಾಣದ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಈಗ ಪುನಃ ಲಕ್ಷ್ಮೀ ಧಾರಾವಾಹಿಯಲ್ಲಿ ಮತ್ತೊಮ್ಮೆ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಪವನ್ ಒಡೆಯರ್ ವಿರುದ್ಧ ಸುದೀಪ್ ಅಭಿಮಾನಿಗಳ ಆಕ್ರೋಶ
ಇನ್ನು ನಂದಿನಿ 2 ಧಾರಾವಾಹಿಯ ನಿರ್ಮಾಣದಲ್ಲಿ ರಮೇಶ್ ಅರವಿಂದ್ ಅವರು ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಈಗಾಗಲೇ ಈ ಧಾರಾವಾಹಿ ಪ್ರತಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಲಿದೆ. ಈಗ ಈ ಧಾರಾವಾಹಿಯಲ್ಲಿ ಅವರು ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ರಮೇಶ್ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎಂಬ ವಿಷಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಇದೆಲ್ಲದರ ಜತೆಗೆ ರಾತ್ರಿ 9ಕ್ಕೆ ಪ್ರಸಾರವಾಗುವ ಮನಸಾರೆ ಧಾರಾವಾಹಿಯಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಟಿಸುತ್ತಿದ್ದಾರೆ.