

ಒಂದೇ ಸಲ ಸಿಕ್ಕವು ಎರಡು ಮೃತ ದೇಹಗಳು
ಬೆಳಗಾವಿ: ಹೆಂಡತಿಯ ನೆನಪಲ್ಲಿ ಗಂಡ ಮತ್ತು ತಾಯಿಯ ನೆನಪಲ್ಲಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚಿತ್ರಲೇಖಾ ಸಫಾರ್, ವಿಜಯ್ ಪವಾರ್ ಮೃತರು. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದಲ್ಲಿ ಎರಡು ಮೃತ ದೇಹಗಳು ತೇಲುತ್ತಿದ್ದವು. ಮೊದಲಿಗೆ ಇದು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಭಾಸವಾಗಿದ್ದರೂ ಸಹ ಇಬ್ಬರದ್ದರೂ ಸಹ ಬೇರೆ ಬೇರೆ ಕಾರಣಕ್ಕೆ ಸಾವಾಗಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ತಾಯಿ ತೀರಿ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಅಸ್ವಸ್ಥವಾಗಿದ್ದ ಚಿತ್ರಲೇಖಾ ಸಫಾರ್. ತಾಯಿಯ ನೆನಪಿನಲ್ಲಿಯೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಹಾಪುರದ ದಾನೆ ಗಲ್ಲಿಯಲ್ಲಿ ಚಿತ್ರಲೇಖಾ ವಾಸವಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಸಾವಿನ ಕಾರಣವನ್ನು ಮಾಧ್ಯಮಗಳಿಗೆ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಬೆಳಗಾವಿಯ ಕಾಂಗಲೇ ಗಲ್ಲಿಯ ನಿವಾಸಿ ವಿಜಯ್ ಪವಾರ್ ತಮ್ಮ ಹೆಂಡತಿ ತೀರಿ ಹೋಗಿದ್ದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಪತ್ನಿ ಮೃತಪಟ್ಟಿದ್ದರು.ನಿನ್ನೆ ರಾತ್ರಿ ಮನೆ ಬಿಟ್ಟು ಹೋದ ವಿಜಯ್ ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವಿಜಯ್ ಪವಾರಗೆ ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿ ಇದ್ದಾರೆ. ಇಬ್ಬರು ಸಾವನ್ನಪ್ಪಿದ ಸ್ಥಳ ಒಂದೇ ಆಗಿರೊದ್ರಿಂದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಕುಟುಂಬಸ್ಥರು ಹೇಳುವಂತೆ ಇದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣಗಳಿವೆ ಎಂಬುವುದರ ಕುರಿತು ಪೊಲೀಸರ ತನಿಖೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ತಾಯಿ ಹಾಗೂ ಹೆಂಡತಿಯ ಸಂಬಂಧಗಳಿಂದ ದೂರವಾದ ಎರಡು ಮುಗ್ದ ಜೀವಗಳು ಅವರ ನೆನಪಿನಲ್ಲಿಯೇ ಪ್ರಾಣ ಬಿಟ್ಟಿದ್ದು, ನಿಜಕ್ಕೂ ದುರಂತವೇ ಸರಿ. ಆದರೆ ತೀರಿ ಹೋದವರ ನೆನಪಲ್ಲಿ ಈಗ ಮನೆಯವರು ಕೊರಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ೈ