

ನವದೆಹಲಿ: ಭಾರತದಂತಹ ದೇಶ ಮತ್ತೊಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ಬ್ರಿಟಿಷ್ ಬ್ಯೂಟಿ ಹಾಗೂ ದಿ ವಿಲನ್ ಸಿನಿಮಾ ನಟಿ ಆಮಿ ಜಾಕ್ಸನ್ ಸ್ವಾತಂತ್ರ್ಯ ದಿನಚರಣೆಯ ಶುಭ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ದಿ ವಿಲನ್ ಸಿನಿಮಾ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಭಾರತವನ್ನು ಉದ್ದೇಶಿಸಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. “ಮದರಾಸಿಪಟ್ಟಣಂ ಚಿತ್ರದಲ್ಲಿ ನಟಿಸುವಾಗ ಸುಂದರ ಭಾರತವನ್ನು ನೋಡಿದೆ. ಆ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟ ಲೇಖಕ ಹಾಗೂ ನಿರ್ದೇಶಕ ವಿಜಯ್ ಅವರಿಗೆ ನಾನು ಚಿರ ಋಣಿ. ಆ ಸಿನಿಮಾ ಅವಕಾಶ ನನ್ನ ವೃತ್ತಿಜೀವನಕ್ಕೆ ಕಿಕ್ ಸ್ಟಾರ್ಟ್ ಆಗಿತ್ತು. ಅಂದಿನಿಂದ ಭಾರತ ನನ್ನ ಎರಡನೇ ಮನೆಯಾಗಿದೆ. ಇಲ್ಲಿನ ಸ್ನೇಹಿತರು ನನಗೆ ಕುಟುಂಬದ ಸದಸ್ಯರಾಗಿದ್ದಾರೆ. ಈ ದೇಶವು ನನಗೆ ಅಸಂಖ್ಯಾತ ಅನುಭವಗಳನ್ನು ಮತ್ತು ನೆನಪುಗಳನ್ನು ನೀಡಿದೆ. ಭಾರತದಂತಹ ದೇಶ ಇನ್ನೊಂದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು'' ಎಂದು ಭಾವುಕರಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತವನ್ನು ಹೊಗಳಿ ಪೋಸ್ಟ್ ಮಾಡಿರುವ ಆಮಿ ಜಾಕ್ಸನ್ ಬ್ರಿಟನ್ ಪ್ರಜೆ. ಹೀಗಾಗಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಇನ್ನು ಆಮಿ ಕೆರಿಯರ್ ವಿಚಾರಕ್ಕೆ ಬಂದರೆ ರಜನಿಕಾಂತ್, ವಿಜಯ್, ರಾಮ್ ಚರಣ್, ವಿಕ್ರಮ್, ಸುದೀಪ್, ಧನುಷ್ ಮುಂತಾದ ಸ್ಟಾರ್ ಹೀರೋಗಳ ಜತೆ ನಟಿಸಿದ್ದಾರೆ. ಈ ನಟಿ ಪೋಸ್ಟ್ಗೆ ಅನೇಕರು ಮೆಚ್ಚಿಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಬ್ರಿಟನ್ ನ ಸುಂದರಿ ಆಮಿ ಜಾಕ್ಸನ್.. ತಮಿಳು ನಾಯಕ ಆರ್ಯ ಅವರ ‘ಮದರಾಸೀಪಟ್ಟಣಂ’ (1947: ತೆಲುಗಿನಲ್ಲಿ ಎ ಲವ್ ಸ್ಟೋರಿ) ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಇಲ್ಲಿನ ಪ್ರೇಕ್ಷಕರಿಗೆ ಪರಿಚಯವಾದರು. ಈ ಚಿತ್ರ ಒಳ್ಳೆಯ ಯಶಸ್ಸನ್ನು ತಂದುಕೊಟ್ಟಿತು. ಆ ನಂತರ ಹಿಂದಿ, ತೆಲುಗು, ಕನ್ನಡ ಭಾಷೆಗಳಲ್ಲಿ ಅವಕಾಶಗಳು ಬರತೊಡಗಿದವು. ಸದ್ಯ ಅವರು ಅರುಣ್ ವಿಜಯ್ ಅಭಿನಯದ ತಮಿಳಿನ 'ಮಿಷನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.