ಚಪ್ಪಲಿ ಧರಿಸಿ ತ್ರಿವರ್ಣ ಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ ಟ್ರೋಲ್‌; ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ನನಗೂ ಗೊತ್ತೆಂದ ನಟಿ

shilpashetty
Published on

ಮುಂಬೈ: ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿರುವ ತನ್ನ ಮನೆಯಲ್ಲಿ ಭಾರತೀಯ ಧ್ವಜಾರೋಹಣ ಮಾಡುವ ಮೂಲಕ ತನ್ನ ಕುಟುಂಬದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.

' ಹರ್ ಘರ್ ತಿರಂಗ ' ಟ್ರೆಂಡ್‌ಗೆ ಸೇರಿದ ಶಿಲ್ಪಾ ಶೆಟ್ಟಿ ಕುಂದ್ರಾ ಆಗಸ್ಟ್ 15 ರಂದು ಧ್ವಜಾರೋಹಣ ಮಾಡುವಾಗ ಬೂಟುಗಳನ್ನು ಧರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾದರು. ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಶಿಲ್ಪಾ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

‘ಸಾಮಾನ್ಯವಾಗಿ ನಾನು ಟ್ರೋಲ್​ಗಳಿಗೆ ಉತ್ತರ ನೀಡುವುದಿಲ್ಲ. ನಿಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಮತ್ತು ನೆಗೆಟಿವಿಟಿ ಹರಡಿದ್ದಕ್ಕೆ ನಾನು ಮೆಚ್ಚುಗೆ ಸೂಚಿಸುವುದಿಲ್ಲ. ಸರಿಯಾಗಿ ಮಾಹಿತಿ ತಿಳಿದುಕೊಂಡು ನಿಮ್ಮ ಮಾತನ್ನು ವಾಪಸ್​ ಪಡೆದುಕೊಳ್ಳಿ. ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ನನಗೂ ಗೊತ್ತು. ದೇಶದ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ನನಗೆ ಗೌರವ ಇದೆ. ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ’ ಎಂದಿದ್ದಾರೆ.

shilpa

ಧ್ವಜಾರೋಹಣದ ಸಮಯದಲ್ಲಿ ಚಪ್ಪಲಿ ಅಥವಾ ಶೂ ಬಿಚ್ಚಬೇಕು ಎಂಬ ನಿಯಯ ಇಲ್ಲ. ಶೂ ಧರಿಸಿ ಧ್ವಜ ಹಾರಿಸಿದರೆ ಅದು ಅಪರಾಧ ಕೂಡ ಅಲ್ಲ. ಆದರೆ ಭಾರತೀಯ ಸಂಪ್ರದಾಯದಲ್ಲಿ ಈ ರೀತಿಯ ವಿಶೇಷ ಸಂದರ್ಭದ ವೇಳೆ ಗೌರವಾರ್ಥವಾಗಿ ಚಪ್ಪಲಿ ಬಿಚ್ಚಲಾಗುತ್ತದೆ ಅಷ್ಟೇ. ಹಾಗಾಗಿ ಅನೇಕರು ಧ್ವಜಾರೋಹಣ ಮಾಡುವಾಗ ಶೂ ಅಥವಾ ಚಪ್ಪಲಿ ಧರಿಸುವುದಿಲ್ಲ. ಒಟ್ಟಿನಲ್ಲಿ ಕೆಲವರು ಶಿಲ್ಪಾ ಶೆಟ್ಟಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದವರು ವಿರೋಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net