

| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಕಚೇರಿಗಳಲ್ಲಿ ‘ಖಾಸಗಿ’ ವ್ಯಕ್ತಿಗಳ ದರ್ಬಾರ್ ಜೋರಾಗಿದೆ. ಅದರಲ್ಲೂ, ಬೆಂಗಳೂರಿನ ಜಯನಗರ ಆರ್ಟಿಒ ಕಚೇರಿಯಲ್ಲೇ ಕುಳಿತು ಸೂಪರಿಂಟೆಂಡೆಂಟ್ ಹೆಸರಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡಿದ ವ್ಯಕ್ತಿ ಹಾಗೂ ಮೈಸೂರು ಆರ್ಟಿಒ ಕಚೇರಿಯಲ್ಲಿ ಅಧಿಕಾರಿ ಹಾಗೂ ನೌಕರರಂತೆ ಅನಧಿಕೃತ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿರುವುದರ ವಿರುದ್ಧ ಎಫ್ಐಆರ್ ದಾಖಲಾ ಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರ್ಟಿಒ ಕಚೇರಿಗಳಲ್ಲಿ ಶೇ.50ಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಇದಲ್ಲದೆ, ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆ ಹಾಗೂ ಮುಂಬಡ್ತಿಗೆ ‘ಸಿಂಡಿಕೇಟ್’ನ ಕೆಲ ಮುಖಂಡರು ‘ಭಾರಿ’ ಡಿಮ್ಯಾಂಡ್ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಲಕ್ಷಗಟ್ಟಲೇ, ಕೆಲವೆಡೆ ಕೋಟ್ಯಂತರ ತೆತ್ತು ಹುದ್ದೆಗೆ ಬಂದವರು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ‘ಸಂಪಾದನೆ’ಗಿಳಿದಿರುವುದು ಗೊತ್ತಾಗಿದೆ. 145 ಬ್ರೇಕ್ ಇನ್ಸ್ಪೆಕ್ಟರ್ಗಳ ನೇಮಕಾತಿಗೆ ಕೆಪಿಎಸ್ಸಿ ಹಾಗೂ ಹೈಕೋರ್ಟ್ ಹಸಿರು ನಿಶಾನೆ ತೋರಿ ತಿಂಗಳುಗಳಾದರೂ ಈವರೆಗೆ ಅವರಿಗೆ ಆದೇಶಪತ್ರ ಕೊಟ್ಟಿಲ್ಲ.
ಹೈದರಾಬಾದ್ ಕರ್ನಾಟಕದ ಐವರು ಎಆರ್ಟಿಒಗಳಿಗೆ ಆರ್ಟಿಒ ಹುದ್ದೆಗೆ ಬಡ್ತಿ ಕೊಡುವಂತೆ ಈ ಹಿಂದಿನ ಸಾರಿಗೆ ಆಯುಕ್ತರೇ ಶಿಫಾರಸು ಮಾಡಿದ್ದರೂ ಈವರೆಗೆ ಅವರಿಗೆ ಬಡ್ತಿ ಕೊಟ್ಟಿಲ್ಲ. ಸಿಂಡಿಕೇಟ್ನ ದಬ್ಬಾಳಿಕೆ ವಿಚಾರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರ ಗಮನಕ್ಕಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆಂದು ಅಧಿಕಾರಿ ವರ್ಗ ಅಸಮಾಧಾನ ವ್ಯಕ್ತಪಡಿಸಿದೆ.
ಬಡ್ತಿ ನೀಡಲು ಮೀನಮೇಷ: ರಾಜ್ಯದಲ್ಲಿ 47 ಆರ್ಟಿಒ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 20 ಹುದ್ದೆಗಳು ಖಾಲಿ ಉಳಿದಿವೆ. ಹೈದರಾಬಾದ್ ಕರ್ನಾಟಕದ ಐವರು ಎಆರ್ಟಿಒಗೆ ಬಡ್ತಿ ಅಥವಾ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವಂತೆ ಕಳೆದ ಮಾರ್ಚ್ನಲ್ಲೇ ಶಿಫಾರಸು ಮಾಡಲಾಗಿದೆ. ಆದರೆ, ಈವರೆಗೂ ಬಡ್ತಿಯನ್ನೇ ಕೊಟ್ಟಿಲ್ಲ. ಉದ್ದೇಶಪೂರ್ವಕವಾಗಿ ತಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.