ಒಡಿಶಾ ಬಾಲಕಿ ಸುಟ್ಟ ಕೇಸ್​ಗೆ ಟ್ವಿಸ್ಟ್​ ; ದೆಹಲಿ ಏಮ್ಸ್​ನಲ್ಲಿ ಬಾಲಕಿ ಸಾವು, ಆತ್ಮಹತ್ಯೆ ಎಂದ ತಂದೆ!| Odisha girl

odisha Girl
Published on

Odisha girl: ಕಳೆದ ತಿಂಗಳು ಮೂವರು ಅಪರಿಚಿತ ದುಷ್ಕರ್ಮಿಗಳಿಂದ ಬೆಂಕಿ ಹಚ್ಚಲಾಗಿತ್ತು ಎಂದು ಹೇಳಲಾದ 15 ವರ್ಷದ ಬಾಲಕಿ ಶನಿವಾರ(ಆಗಸ್ಟ್ 2) ಸಂಜೆ ದೆಹಲಿಯ ಏಮ್ಸ್​ನಲ್ಲಿ ಮೃತಪಟ್ಟಿದ್ದಾಳೆ. ಸದ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದು ಕೊಲೆಯಲ್ಲ, ಆತ್ಮಹತ್ಯೆ ಎಂದು ಬಾಲಕಿ ತಂದೆ ಹೇಳಿದ್ದಾರೆ.

ಬಾಲಕಿ ಸಾವಿನ ನಂತರ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಬಾಲಕಿ ತಂದೆ, "ನನ್ನ ಮಗಳು ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜ್ಯ ಸರ್ಕಾರ ನಮಗೆ ಎಲ್ಲಾ ರೀತಿಯ ಸಹಾಯ ಮಾಡಿದೆ. ಇಂದು ನನ್ನ ಮಗಳು ನಮ್ಮೊಂದಿಗಿಲ್ಲ. ಈ ಪ್ರಕರಣವನ್ನು ರಾಜಕೀಯ ಪಕ್ಷಗಳು ರಾಜಕೀಯಗೊಳಿಸುವುದು ಬೇಡ. ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಎಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಒಡಿಶಾ ಪೊಲೀಸರು, ಈ ಘಟನೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಆರಂಭದಲ್ಲಿ, ಈ ಘಟನೆಯನ್ನು ಗುರುತಿಸಲಾಗದ ಮೂವರು ಯುವಕರ ಗುಂಪು ಹಚ್ಚಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿತ್ತು. ಹುಡುಗಿಯ ತಾಯಿ ಕೂಡ ಇದೇ ರೀತಿ ದೂರು ನೀಡಿದ್ದರು.

"ಪ್ರಕರಣದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಈ ಸಮಯದಲ್ಲಿ ಕೇಸ್​ ಸಂಬಂಧ ಯಾವುದೇ ಸೂಕ್ಷ್ಮ ಹೇಳಿಕೆಗಳನ್ನು ನೀಡದಂತೆ ನಾವು ಎಲ್ಲರನ್ನೂ ವಿನಂತಿಸುತ್ತೇವೆ" ಎಂದು ಈ ಕುರಿತು ಒಡಿಶಾ ಪೊಲೀಸರು ಎಕ್ಸ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಕಿ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶಾ ಸಿಎಂ ಮಾಝಿ, "ಬಲಾಂಗ ಘಟನೆಯ ಸಂತ್ರಸ್ತೆ ಸಾವು ನನಗೆ ತೀವ್ರ ಆಘಾತ ತಂದಿದೆ. ಸರ್ಕಾರ ಎಲ್ಲಾ ಪ್ರಯತ್ನಗಳ ಮತ್ತು ಏಮ್ಸ್ ವೈದ್ಯರ ನಿರಂತರ ಪ್ರಯತ್ನದ ಹೊರತಾಗಿ ಬಾಲಕಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಕರಣದ ಬಗ್ಗೆ ತನಿಖೆ ನಡೆಸಿದ್ದ ಪುರಿ ಪೊಲೀಸರು ಜುಲೈ 19ರಂದು ಏಮ್ಸ್​ನಲ್ಲಿ ಬಾಲಕಿ ಹೇಳಿಕೆ ದಾಖಲಿಸಿದ್ದರು. ತನ್ನ ಸ್ನೇಹಿತನಿಗೆ ಪುಸ್ತಕ ನೀಡಲು ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಮೂವರು ಅಪಹರಿಸಿ ನದಿಯ ದಡಕ್ಕೆ ಕರೆದೊಯ್ದು ಬೆಂಕಿ ಹಚ್ಚಿದ್ದರು ಎಂದು ಹೇಳಿಕೆ ದಾಖಲಿಸಿದ್ದಳು. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಬಾಲಕಿ ನೀಡಿದ ಹೇಳಿಕೆ ತದ್ವಿರುದ್ಧವಾಗಿದ್ದು ಕಂಡು ಬಂದಿದ್ದು, ಆತ್ಮಹತ್ಯೆ ಕೋನದಿಂದಲೂ ತನಿಖೆ ನಡೆಸಿದ್ದರು. ಸದ್ಯ ಪೊಲೀಸರ ತನಿಖೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು ದೃಢವಾಗಿದೆ.

ಘಟನೆ ಹಿನ್ನೆಲೆ

ಜುಲೈ 19 ರಂದು ಪುರಿ ಜಿಲ್ಲೆಯ ಬಲಂಗಾ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಬೆಂಕಿ ಹಚ್ಚಲಾಗಿತ್ತು, ಈ ಅಪರಾಧದಲ್ಲಿ ಮೂವರು ಪುರುಷರು ಭಾಗಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿ ನಂತರ ಭುವನೇಶ್ವರದ ಏಮ್ಸ್‌ಗೆ ಸ್ಥಳಾಂತರಿಸಿದ್ದರು. ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಒಂದು ದಿನದ ನಂತರ ಬಾಲಕಿಯನ್ನು ವಿಮಾನದ ಮೂಲಕ ಏಮ್ಸ್-ದೆಹಲಿಗೆ ಕರೆದೊಯ್ಯಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net