ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಕ್ಕಳಿಬ್ಬರಿಗೆ ವಿಷವುಣಿಸಿ ಸಾವಿಗೆ ಶರಣಾದ ಶಿಕ್ಷಕ! Extra Marital Affairs

Extra Marital Affairs
Published on

Extra Marital Affairs : ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ, ವ್ಯಕ್ತಿಯೊಬ್ಬ 7 ಮತ್ತು 2 ವರ್ಷದ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ, ತಾನೂ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಗುಜರಾತಿನಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

ಮೃತ ವ್ಯಕ್ತಿಯನ್ನು ಅಲ್ವೇಶ್​ಭಾಯ್ (41)​ ಎಂದು ಗುರುತಿಸಲಾಗಿದೆ. ಇವರು ಸೂರತ್ ನಗರದ ದಿಂಡೋಲಿಯಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಅಲ್ಪೇಶ್‌ಭಾಯ್ ತನ್ನ ಪತ್ನಿಯ ಫೋನ್ ಕರೆಯನ್ನು ಸ್ವೀಕರಿಸಲಿಲ್ಲ. ಬಳಿಕ ಆಕೆ ಮನೆಗೆ ಬಂದಾಗ ಬಾಗಿಲುಗಳು ಲಾಕ್ ಆಗಿರುವುದನ್ನು ನೋಡಿದರು. ಇದಾದ ನಂತರ ಆಕೆ, ತಮ್ಮ ಸಂಬಂಧಿಕರಿಗೆ ಕರೆ ಮಾಡಿದರು. ಬಳಿಕ ಅವರ ಸಹಾಯದಿಂದ ಬಾಗಿಲನ್ನು ಒಡೆದು ಒಳಗಡೆ ಹೋಗಿ ನೋಡಿದಾಗ, ಹಾಸಿಗೆಯ ಮೇಲೆ ಮಕ್ಕಳು ಮತ್ತು ಅಲ್ಲೇ ಹತ್ತಿರದಲ್ಲಿ ಅಲ್ಪೇಶ್‌ಭಾಯ್ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಸೂರತ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಜಯ್ ಸಿಂಗ್ ಗುರ್ಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೃತನ ಮೊಬೈಲ್‌ನಲ್ಲಿ ಡೆತ್​ನೋಟ್​, ಎರಡು ಡೈರಿಗಳು ಮತ್ತು ಕೆಲವು ವಿಡಿಯೋಗಳನ್ನು ಸಹ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಅಲ್ಪೇಶ್‌ಭಾಯ್ ಅವರ ಸಹೋದರ ಪೊಲೀಸರಿಗೆ ದೂರು ಸಹ ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಸಹೋದರನ ಪತ್ನಿ ಫಲ್ಗುಣಿ ಭಾಯ್, ನರೇಶ್ ಕುಮಾರ್ ರಾಥೋಡ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದಾರೆ.

ಪತ್ನಿಯ ಅನೈತಿಕ ಸಂಬಂಧದಿಂದಾಗಿ ಅಲ್ಪೇಶ್​ಭಾಯ್​ ತೀವ್ರ ಒತ್ತಡದಲ್ಲಿದ್ದರು ಮತ್ತು ಅದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ಅಲ್ಪೇಶ್‌ಭಾಯ್ ಕಳೆದ 1-2 ತಿಂಗಳುಗಳಿಂದ ವಿವರವಾದ ಟಿಪ್ಪಣಿಗಳನ್ನು ಬರೆಯುತ್ತಿದ್ದ. ಇದಕ್ಕೆ ಸಂಬಂಧಿಸಿದ ಅವರ ಕೊಠಡಿಯಿಂದ ಒಂದು ಡೈರಿ ಪತ್ತೆಯಾಗಿದೆ ಎಂದು ಪೊಲೀಸರು ಇದೇ ವೇಳೆ ಹೇಳಿದ್ದಾರೆ.

ತನಿಖಾ ಕಾರ್ಯಕ್ಕಾಗಿ ಎರಡೂ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಡೆತ್​ನೋಟ್​ 5-6 ಪುಟಗಳಷ್ಟಿದೆ. ಅದನ್ನು ತಮ್ಮ ಪಾಲಕರು ಮತ್ತು ಪತ್ನಿಗೆ ಅಲ್ಪೇಶ್​ ಬರೆದಿದ್ದಾರೆ. ಅಕ್ರಮ ಸಂಬಂಧದಿಂದಾಗಿ ಒತ್ತಡದಲ್ಲಿದ್ದೆನು ಎಂಬುದಾಗಿ ಅಲ್ಪೇಶ್​ ಬರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಎರಡು ಡೈರಿಗಳಲ್ಲಿ ಒಂದು ಡೈರಿ ಮಾತ್ರ ಅವರ ಪತ್ನಿಗಾಗಿಯೇ ಬರೆಯಲಾಗಿದೆ. ಅದರಲ್ಲಿ, ಎಲ್ಲ ವಿವರಗಳನ್ನು ಉಲ್ಲೇಖಿಸಲಾಗಿದೆ. ಅನೈತಿಕ ಸಂಬಂಧ ವಿಚಾರವಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net