ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ; ಕೋರ್ಟ್​ ಅಂಗಳದಲ್ಲಿ ಪ್ರಜ್ವಲ್ ಕೋರಿದ್ದೇನು? ಇಲ್ಲಿದೆ ಸಂಪೂರ್ಣ​ ಮಾಹಿತಿ | Prajwal Revanna

ವಿಜಯವಾಣಿ - 2025-08-02T192515.247
Published on

Prajwal Revanna: ಆ.01ರಂದು ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಅಪರಾಧಿ ಎಂದು ತೀರ್ಪು ನೀಡಿದ್ದ ಕೋರ್ಟ್​, ಇಂದಿನ ವಿಚಾರಣೆಯಲ್ಲಿ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಇದರೊಟ್ಟಿಗೆ ಐದು ಲಕ್ಷ ರೂ. ದಂಡ ಹಾಗೂ ಸಂತ್ರಸ್ತ ಮಹಿಳೆಗೆ 11 ಲಕ್ಷ ರೂ. ಪರಿಹಾರವನ್ನು ನೀಡಲು ಆದೇಶಿಸಿತು.

ಕೋರ್ಟ್​ ಅಂಗಳದಲ್ಲಿ ಪ್ರಜ್ವಲ್ ಕೋರಿದ್ದೇನು?

ವರದಿಗಳ ಪ್ರಕಾರ, ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನ ವಿಚಾರಣೆಯಲ್ಲಿ, "ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರು ಸ್ವಯಂಪ್ರೇರಿತವಾಗಿ ಮುಂದೆ ಬಂದು ದೂರು ದಾಖಲಿಸಿಲ್ಲ. ಕಳೆದ ವರ್ಷ ಲೋಕಸಭಾ ಚುನಾವಣೆಗೆ ಇನ್ನು ಆರು ದಿನಗಳು ಬಾಕಿ ಇರುವಾಗ ಈ ರೀತಿ ಮಾಡಲಾಯಿತು. ಬಲವಂತವಾಗಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ. ರಾಜಕೀಯದಲ್ಲಿ ವೇಗವಾಗಿ ಬೆಳೆದಿದ್ದೇ ಇಂದು ನನಗೆ ಮುಳ್ಳಾಯಿತು. ನಾನು ಮೆರಿಟ್​ ವಿದ್ಯಾರ್ಥಿ. ಬಿಇ ಮೆಕ್ಯಾನಿಕಲ್ ಪದವೀಧರ. ಕಳೆದ ಆರು ತಿಂಗಳಿನಿಂದ ನಮ್ಮ ತಂದೆ-ತಾಯಿಯ ಮುಖ ನೋಡಿಲ್ಲ. ಶಿಕ್ಷೆ ಪ್ರಕಟಿಸುವಾಗ ನನ್ನ ಪೋಷಕರನ್ನು ಪರಿಗಣಿಸಿ" ಎಂದು ಪ್ರಜ್ವಲ್​ ಅಳಲು ವ್ಯಕ್ತಪಡಿಸಿದ್ದ. ಇದೆಲ್ಲವನ್ನೂ ಆಲಿಸಿದ ಬಳಿಕವೇ ನ್ಯಾಯಾಲಯ, ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

ಏನಿದು ಪೆನ್​ಡ್ರೈವ್​ ಕಥೆ?

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ತನ್ನ ಎದುರಾಳಿ ವಿರುದ್ಧ ಗೆಲುವು ಸಾಧಿಸಲು ಹಪಾಹಪಿಯಲ್ಲಿದ್ದ. ಮತ ಚಲಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ವ್ಯಾಪಕವಾಗಿ ಕೇಳಿಬಂದಿತು. ಇದಕ್ಕೆ ಪುಷ್ಠಿ ನೀಡುವಂತೆ, ಪ್ರಜ್ವಲ್​ನನ್ನು ಒಳಗೊಂಡ ಸಾಕಷ್ಟು ಅಶ್ಲೀಲ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿತು. ಇದು ಸುದ್ದಿಯಾಗುತ್ತಿದ್ದಂತೆ ಪ್ರಜ್ವಲ್​ ವಿದೇಶಕ್ಕೆ ಹಾರಿದ್ದು, ದೊಡ್ಡ ಅಚ್ಚರಿ ಹಾಗೂ ಅನುಮಾನಕ್ಕೆ ಕಾರಣವಾಯಿತು.

ಪ್ರಜ್ವಲ್ ರೇವಣ್ಣ ಒಳಗೊಂಡ ಹಲವಾರು ಅಶ್ಲೀಲ ವಿಡಿಯೋಗಳು ಆತನ ಪೆನ್​ಡ್ರೈವ್​ನಲ್ಲಿರುವುದು ಬೆಳಕಿಗೆ ಬಂದಿತ್ತು. ಇದನ್ನು ಸ್ವತಃ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಬಟಾಬಯಲು ಮಾಡಿದ್ದರು. ಈ ಕುರಿತಂತೆ ಒಂದಷ್ಟು ಮಾಧ್ಯಮಗಳಲ್ಲಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಚುನಾವಣೆ ಬಳಿಕ ವಿದೇಶದಲ್ಲಿ ಅಡಗಿದ್ದ ಪ್ರಜ್ವಲ್​ಗೆ​, ಬ್ಯಾಕ್​ ಟು ಬ್ಯಾಕ್​ ಲುಕ್​ಔಟ್​ ನೋಟಿಸ್​ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ವಿದೇಶದಿಂದ ನೇರವಾಗಿ ಬೆಂಗಳೂರು ಏರ್​ಪೋರ್ಟ್​ಗೆ ಬಂದಿಳಿಯುತ್ತಿದ್ದಂತೆ ಆತನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿ, ಕಸ್ಟಡಿಗೆ ಒಳಪಡಿಸಿದರು. ಇನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್​ ಪಟೇಲ್ ಭರ್ಜರಿ ಲೀಡ್​ ಪಡೆದು, ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

ಪಾಸ್​ಪೋರ್ಟ್​ ರದ್ದತಿಗೆ ಮನವಿ ಮಾಡಿತ್ತು SIT

ಈ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳು ಸಮೀಪಿಸಿದರೂ ಪ್ರಜ್ವಲ್ ರೇವಣ್ಣ ಮಾತ್ರ ಇನ್ನೂ ವಿದೇಶದಿಂದ ಬೆಂಗಳೂರಿಗೆ ವಾಪಾಸ್ ಆಗಿರಲಿಲ್ಲ. ಈ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎಸ್​ಐಟಿಗೆ, ಮಾಜಿ ಸಂಸದನ ಪ್ರಕರಣ ದೊಡ್ಡ ತಲೆನೋವಾಗಿ ಕಾಡಿತ್ತು. ಬಂಧನದ ವಾರೆಂಟ್ ಉಲ್ಲೇಖ ಮಾಡಿ, ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ರವಾನಿಸಿತ್ತು. ಇದರಲ್ಲಿ, ಈ ಕೂಡಲೇ ಪ್ರಜ್ವಲ್​ಗೆ ಸಂಬಂಧಿಸಿದ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಬೇಕು ಎಂದು ಪತ್ರದ ಮುಖೇನ ಮನವಿ ಮಾಡಲಾಗಿತ್ತು.

ಗಟ್ಟಿಯಾಗಿ ಸಾಕ್ಷಿ ಹೇಳಿದ್ದು ಮನೆ ಕೆಲಸದಾಕೆ!

ಪ್ರಜ್ವಲ್ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್​ಗಳ ಪೈಕಿ, ಮೈಸೂರಿನ ಕೆ.ಆರ್.​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಕೇಸ್​ ಬಲವಾಯಿತು. ಈ ಪ್ರಕರಣದ ಸಂತ್ರಸ್ತೆ ಗಟ್ಟಿಯಾಗಿ ನಿಂತಿದ್ದೇ ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಾಯಿತು. ಕೇವಲ ಇದೊಂದು ಕೇಸ್​ನಲ್ಲಿ ಪ್ರಜ್ವಲ್​ಗೆ ಕಠಿಣ ಶಿಕ್ಷೆ ವಿಧಿಸಿರುವ ಕೋರ್ಟ್​, ಉಳಿದ ಮೂರು ಕೇಸ್​ಗಳನ್ನು ಪರಿಶೀಲಿಸಿದರೆ, ಇನ್ಯಾವ ಶಿಕ್ಷೆಯನ್ನು ವಿಧಿಸಲಿದೆ ಎಂಬುದೇ ಹಲವರ ಕುತೂಹಲ. ಸಂತ್ರಸ್ತ ಮಹಿಳೆ ಕೋರ್ಟ್​ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಗಟ್ಟಿಯಾಗಿ ನಿಂತಿದ್ದೇ ಇಂದು ಆಕೆಗೆ ಜಯ ತಂದುಕೊಟ್ಟಿದೆ. ಮತ್ತು ಮಾಜಿ ಸಂಸದನನ್ನು ಜೀವನಪರ್ಯಂತ ಜೀವಾವಧಿ ಶಿಕ್ಷೆ ಅನುಭವಿಸುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net