

Rajnath Singh: ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ತಮ್ಮ ಬಳಿ ಅಣು ಬಾಂಬ್ ಇದೆ ಎಂದು ಹೇಳಿದ್ದಾರೆ. ಒಂದು ವೇಳೆ ಇದ್ರೆ ಅದನ್ನು ತಕ್ಷಣವೇ ಸ್ಫೋಟಿಸಲಿ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಈ ಕುರಿತು ಮಾತನಾಡಿರುವ ರಾಜನಾಥ್ ಸಿಂಗ್, "ರಾಹುಲ್ ಗಾಂಧಿಯವರ ಹಿಂದಿನ ಹೇಳಿಕೆಗಳನ್ನು ದೇಶ ನೆನಪಿಸಿಕೊಳ್ಳುತ್ತದೆ. ಅವರು ಸಂಸತ್ತಿನಲ್ಲಿ ಭೂಕಂಪದ ಬೆದರಿಕೆ ಹಾಕಿದ್ದರು. ಅದನ್ನು ಸಂಸತ್ನಲ್ಲಿ ಮಂಡಿಸಿದಾಗ ಅದು ನಿಷ್ಪ್ರಯೋಜಕ ಹೇಳಿಕೆಯಾಗಿ ಪರಿಣಮಿಸಿತು. ಈಗ ಚುನಾವಣಾ ಆಯೋಗವನ್ನು ದೂಷಿಸುತ್ತಿದ್ದಾರೆ. ಆಯೋಗ ಭಾರತದಲ್ಲಿ ಯಾವುದೇ ವಿವಾದ ಇಲ್ಲದ ಗೌರವಾನ್ವಿತ ಸಂಸ್ಥೆಯಾಗಿದೆ" ಎಂದು ಹೇಳಿದರು.
"ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯಾವುದೇ ಸಾಂವಿಧಾನಿಕ ಸಂಸ್ಥೆಯ ಬಗ್ಗೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ವಿರೋಧ ಪಕ್ಷದ ನಾಯಕರಿಗೆ ಸೂಕ್ತವಲ್ಲ" ಎಂದು ಸಿಂಗ್ ಹೇಳಿದರು.
1974ರಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಯತ್ನಿಸಿದೆ. ಕಾಂಗ್ರೆಸ್ ಕೈಗಳ ಮೇಲೆ ರಕ್ತದ ಕಲೆಗಳಿವೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಹೇಳಿದ್ದೇನು?
ನವದೆಹಲಿಯಲ್ಲಿ ಇಂದು(ಆಗಸ್ಟ್ 2) ಕಾಂಗ್ರೆಸ್ ಪಕ್ಷದ ವಾರ್ಷಿಕ ಕಾನೂನು ಸಮಾವೇಶ-2025 ರಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಭಾರತದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿದ್ದು, ಇದು ಭಾರತೀಯ ಜನತಾ ಪಕ್ಷಕ್ಕೆ ಬಹಳ ಕಡಿಮೆ ಬಹುಮತವನ್ನು ನೀಡಿತು. 15 ಕ್ಷೇತ್ರಗಳಲ್ಲಿ ರಿಗ್ಗಿಂಗ್ ನಡೆಯಲಿಲ್ಲ ಎಂದಿದ್ದರೆ ಇಂದು ಮೋದಿ ಪ್ರಧಾನಿಯಾಗಿ ಇರುತ್ತಿರಲಿಲ್ಲ" ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಹೇಗೆ, ಯಾವ ರೀತಿಯಲ್ಲಿ ಅಕ್ರಮ ನಡೆಯಿತು ಎಂದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅದನ್ನು ಸಾಬೀತುಪಡಿಸುವ ಪುರಾವೆಗಳ ಮೂಲಕ ದೇಶದ ಜನರ ಮುಂದೆ ಪ್ರಸ್ತುತ ಪಡಿಸಲಿದೆ. ಭಾರತೀಯ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದ್ದ ಸಂಸ್ಥೆಯನ್ನು ಕೈವಶಪಡಿಸಿಕೊಂಡು ನಾಶ ಮಾಡಿದ್ದಾರೆ. ಪ್ರಸ್ತುತವಾಗಿ ದೇಶದಲ್ಲಿ ಇಂದು ಚುನಾವಣಾ ಆಯೋಗ ಅಸ್ತಿತ್ವದಲ್ಲಿ ಇಲ್ಲ, ಅದನ್ನು ತೋರಿಸುವಂತಹ ಪುರಾವೆಗಳು ನಮ್ಮಲ್ಲಿವೆ ಎಂದು ಆಯೋಗದ ವಿರುದ್ಧ ಕಿಡಿಕಾರಿದ್ದರು.
ಈ ಪುರಾವೆಯನ್ನು ಕಂಡು ಹಿಡಿಯಲು ನಾವು ನಿರಂತರವಾಗಿ 6 ತಿಂಗಳ ಕಾಲ ಕೆಲಸ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಹೇಗೆ ಮತಗಳ್ಳತನ ನಡೆಯಿತು ಎಂಬುದನ್ನು ನೀವು ನೋಡ್ತೀರಿ. 6.5 ಲಕ್ಷ ಮತದಾರರು ಮತ ಚಲಾಯಿಸುತ್ತಾರೆ. ಅದರಲ್ಲಿ 1.5 ಲಕ್ಷ ಮತದಾರರು ನಕಲಿಯಾಗಿದ್ದಾರೆ. ನಾವು ಈ ದಾಖಲೆ ಬಿಡುಗಡೆ ಮಾಡಿದಾಗ ಚುನಾವಣಾ ವ್ಯವಸ್ಥೆ ನಡೆಯುವ ಆಘಾತಕಾರಿ ಘಟನೆಗಳನ್ನು ನೋಡಲಿದ್ದೀರಿ. ಇದು ಅಕ್ಷರಶಃ ಅಣು ಬಾಂಬ್ ರೀತಿ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)